ADVERTISEMENT

ಬೆಂಗಳೂರು: ಕಾಂಗ್ರೆಸ್‌ನಿಂದ ಬಿಬಿಎಂಪಿಗೆ ಮುತ್ತಿಗೆ

ಆಸ್ತಿ ತೆರಿಗೆ, ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 2:31 IST
Last Updated 27 ಆಗಸ್ಟ್ 2021, 2:31 IST
ಕಾಂಗ್ರೆಸ್‌ ಕಾರ್ಯಕರ್ತರು ಬಿಬಿಎಂಪಿ ಕಚೇರಿ ಎದುರು ಗುರುವಾರ ನಡೆಸಿದ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮಾತನಾಡಿದರು. ಶಾಸಕ ರಿಜ್ವಾನ್‌ ಅರ್ಷದ್, ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣ ಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡರು
ಕಾಂಗ್ರೆಸ್‌ ಕಾರ್ಯಕರ್ತರು ಬಿಬಿಎಂಪಿ ಕಚೇರಿ ಎದುರು ಗುರುವಾರ ನಡೆಸಿದ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮಾತನಾಡಿದರು. ಶಾಸಕ ರಿಜ್ವಾನ್‌ ಅರ್ಷದ್, ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣ ಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡರು   

ಬೆಂಗಳೂರು: ನಗರದ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯ ವಲಯ ವರ್ಗೀಕರಣಕ್ಕೆ ತಕ್ಕಂತೆ ತೆರಿಗೆ ಪಾವತಿಸದವರಿಗೆ ದಂಡ ವಸೂಲಿಗೆ ಬಿಬಿಎಂಪಿ ನೋಟಿಸ್‌ ಜಾರಿ ಮಾಡಿರುವುದು ಹಾಗೂ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸಿಲಿಂಡರ್‌ ದರ ಹೆಚ್ಚಳ ವಿರೋಧಿಸಿ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್‌ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಗುರುವಾರ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಆಸ್ತಿ ತೆರಿಗೆಯ ವಲಯ ವರ್ಗೀಕರಣಕ್ಕೆ ಅನುಸಾರವಾಗಿ ತೆರಿಗೆ ಪಾವತಿಸದವರಿಗೆ ದಂಡ ವಿಧಿಸುವ ಕ್ರಮವನ್ನು ಕೈಬಿಡುವಂತೆ ಆಗ್ರಹಿಸಿದರು. ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ತಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ‘ಆಸ್ತಿ ತೆರಿಗೆ ವಲಯ ವರ್ಗೀಕರಣಕ್ಕೆ ಅನುಗುಣವಾಗಿ ತೆರಿಗೆ ಪಾವತಿಸದವರಿಗೆ ದುಬಾರಿ ದಂಡ ವಿಧಿಸುವ ವಿಚಾರದಲ್ಲಿ ಬಿಬಿಎಂಪಿ ತಪ್ಪು ಮಾಡುತ್ತಿದೆ. ₹ 120 ಕೋಟಿ ಆಸ್ತಿ ತೆರಿಗೆ ಬಾಕಿಗೆ ₹ 240 ಕೋಟಿ ಬಡ್ಡಿ ಮತ್ತು ದಂಡ ವಿಧಿಸುವುದು ಸರಿಯಾದ ಕ್ರಮವಲ್ಲ. ಈ ತೀರ್ಮಾನವನ್ನು ಹಿಂಪಡೆಯಲು ನಾವು ನೀಡಿದ್ದ ಗಡುವು ಮುಗಿದಿದೆ. ಆದ್ದರಿಂದ ಹೋರಾಟ ಆರಂಭಿಸಿದ್ದೇವೆ. ಬಡ್ಡಿ ಹಾಗೂ ದಂಡ ವಿಧಿಸುವ ತೀರ್ಮಾನ ಕೈಬಿಡುವವರೆಗೂ ಹೋರಾಟ ಮುಂದುವರಿಸಲಾಗುವುದು’ ಎಂದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಪಿ.ಆರ್‌. ರಮೇಶ್, ‘ಅನಗತ್ಯವಾಗಿ ಜನರ ಮೇಲೆ ಆರ್ಥಿಕ ಹೊರೆ ಹೇರುವ ಕ್ರಮವನ್ನು ಬಿಬಿಎಂಪಿ ಆಡಳಿತ ಅನುಸರಿಸುತ್ತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನೂ ಖಾಸಗೀಕರಣ ಮಾಡುವ ಪ್ರಯತ್ನ ನಡೆಯುತ್ತಿದೆ. ಕಾನೂನುಬಾಹಿರವಾಗಿ ವಿಧಿಸಿರುವ ಹೆಚ್ಚುವರಿ ತೆರಿಗೆಯ ಹೊರೆಯನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ, ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ. ಶೇಖರ್‌, ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ. ಕೃಷ್ಣಪ್ಪ, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ. ರಾಜ್‌ಕುಮಾರ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.