ADVERTISEMENT

ಮೇಖ್ರಿ ವೃತ್ತದಿಂದ ರೇಷ್ಮೆ ಮಂಡಳಿಯ ಕಾರಿಡಾರ್‌: 27 ಕಿಮೀ ಸುರಂಗ ರಸ್ತೆಗೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 0:00 IST
Last Updated 30 ಜನವರಿ 2024, 0:00 IST
ಸುರಂಗ ರಸ್ತೆಯ ಮಾದರಿ
ಸುರಂಗ ರಸ್ತೆಯ ಮಾದರಿ   

ಬೆಂಗಳೂರು: ನಗರದಲ್ಲಿ ವಾಹನ ಸಂಚಾರವನ್ನು ಸುಗಮಗೊಳಿಸಲು 60 ಕಿ.ಮೀ ಸುರಂಗ ರಸ್ತೆಯನ್ನು ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮೊದಲು ಉತ್ತರ–ದಕ್ಷಿಣ ಕಾರಿಡಾರ್‌ ನಿರ್ಮಾಣಕ್ಕೆ ಸಮ್ಮತಿ ನೀಡಲಾಗಿದೆ.

ಮೇಖ್ರಿ ವೃತ್ತದಿಂದ ಕೇಂದ್ರೀಯ ರೇಷ್ಮೆ ಮಂಡಳಿವರೆಗೆ ಸುಮಾರು 27 ಕಿ.ಮೀ ಸುರಂಗ ರಸ್ತೆಯನ್ನು ನಿರ್ಮಿಸಲು ಅಲ್ಟಿನೋಕ್‌ ಇಂಡಿಯಾ ಸಂಸ್ಥೆ ಯೋಜನೆ ರೂಪಿಸುತ್ತಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ, ಪ್ರಾಯೋಗಿಕವಾಗಿ ಹೆಬ್ಬಾಳದಿಂದ ಮೇಖ್ರಿ ವೃತ್ತದವರೆಗೆ 3 ಕಿ.ಮೀ ರಸ್ತೆಯನ್ನು ಕೂಡಲೇ ಪ್ರಾರಂಭಿಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೂಚಿಸಿದ್ದಾರೆ.

ಬಿಬಿಎಂಪಿ ಎಂಜಿನಿಯರ್‌ಗಳು, ಯೋಜನಾ ತಜ್ಞರೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ಡಿಸಿಎಂ, ‘ರಾಜ್ಯದ ಮುಂದಿನ ಬಜೆಟ್‌ನಲ್ಲಿ ಸುರಂಗ ರಸ್ತೆ ನಿರ್ಮಿಸಲೆಂದೇ ಅನುದಾನ ನೀಡಲಾಗುತ್ತದೆ. ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ 3 ಕಿ.ಮೀ ಪ್ರಾಯೋಗಿಕವಾಗಿ ರಸ್ತೆ ನಿರ್ಮಿಸಲು ಕಾಮಗಾರಿ ಆರಂಭಿಸಿ. ಕಾರಿಡಾರ್‌ನ ಪೂರ್ಣ ಮಾರ್ಗ ಪೂರ್ಣಗೊಳಿಸಲೂ ಡಿಪಿಆರ್‌ ಸಿದ್ಧಪಡಿಸಿ’ ಎಂದು ಆದೇಶಿಸಿದ್ದಾರೆ.

ADVERTISEMENT

ಎರಡು ‘ಪಾಯಿಂಟ್‌’: ‘ಹೆಬ್ಬಾಳ ಕೆರೆಯ ಮುಂಭಾಗದಿಂದ ಉತ್ತರ–ದಕ್ಷಿಣ ಸುರಂಗ ರಸ್ತೆ ಕಾರಿಡಾರ್‌ ಆರಂಭವಾಗಿ, ಕೇಂದ್ರೀಯ ರೇಷ್ಮೆ ಮಂಡಳಿಯವರೆಗೆ ಸಾಗಲಿದೆ. ಕೆರೆಯ ಮುಂಭಾಗ ವಾಹನಗಳ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶವಿರುತ್ತದೆ. ಇದಾದ ನಂತರ, ಹೆಬ್ಬಾಳ ಪಶುವೈದ್ಯ ಆಸ್ಪತ್ರೆ ಬಳಿ ವಾಹನಗಳ ನಿರ್ಗಮನ ಮತ್ತು ಪ್ರವೇಶಕ್ಕಾಗಿ ‘ಪಾಯಿಂಟ್‌’ ನಿರ್ಮಿಸಲಾಗುತ್ತದೆ. ಮೇಖ್ರಿ ವೃತ್ತದ ಅರಮನೆ ಮೈದಾನ , ಗಾಲ್ಫ್‌ ಮೈದಾನ ಮತ್ತು ಮಹಾರಾಣಿ ಕಾಲೇಜಿನ ಬಳಿಯಲ್ಲಿ ‘ಪಾಯಿಂಟ್‌’ ನಿರ್ಮಿಸಲು ಸದ್ಯಕ್ಕೆ ಯೋಜಿಸಲಾಗಿದೆ. ಪ್ರಾಯೋಗಿಕ ನಿರ್ಮಾಣದಲ್ಲಿ ಮೇಖ್ರಿ ವೃತ್ತದವರೆಗೆ ಸುರಂಗ ರಸ್ತೆ ಇರಲಿದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ತಿಳಿಸಿದರು.

‘ಸುರಂಗ ರಸ್ತೆ ಮೂಲಕ ಬೈಪಾಸ್‌, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುವ ಯೋಜನೆ ರೂಪಿಸಿ, ಆ ಇಲಾಖೆಗಳಿಂದಲೂ ಅನುದಾನ ಪಡೆದುಕೊಳ್ಳುವ ಕಾರ್ಯಸಾಧ್ಯತಾ ವರದಿ ಸಲ್ಲಿಸಲು ಶಿವಕುಮಾರ್‌ ಸೂಚಿಸಿದ್ದಾರೆ. ಸುರಂಗ ರಸ್ತೆ ಮಾಡುವುದರಿಂದ ಭೂ ಸ್ವಾಧೀನ, ಗಿಡ–ಮರಗಳ ಕಡಿತ, ಸಂಚಾರ ಮಾರ್ಗ ಬದಲಾವಣೆಯಂತಹ ಸಮಸ್ಯೆಗಳು ಎದುರಾಗುವುದಿಲ್ಲ. ಪ್ರತಿ ಕಿ.ಮೀ ಸುರಂಗ ರಸ್ತೆಗೆ ₹450 ಕೋಟಿ ವೆಚ್ಚವಾಗಲಿದೆ. ಹೆಚ್ಚು ದೂರ ನಿರ್ಮಿಸಿದರೆ ವೆಚ್ಚ ಕಡಿಮೆಯಾಗಲಿದೆ’ ಎಂದರು. 

‘ನಮ್ಮ ಮೆಟ್ರೊ’ ಆಸಕ್ತಿ 

‘ಬಿಬಿಎಂಪಿ ಸುರಂಗ ರಸ್ತೆ ನಿರ್ಮಿಸುವ ಮಾರ್ಗದಲ್ಲಿ ಬಿಎಂಆರ್‌ಸಿಎಲ್‌ ‘ನಮ್ಮ ಮೆಟ್ರೊ’ ಸಂಚಾರ ಮಾರ್ಗವನ್ನು ನಿರ್ಮಿಸುವ ಪ್ರಸ್ತಾವವನ್ನೂ ಇರಿಸಿದೆ. ಹೀಗಾಗಿ, ‘ನಮ್ಮ ಮೆಟ್ರೊ’ ಮಾರ್ಗ ಹಾಗೂ ರಸ್ತೆಯನ್ನು ಸುರಂಗದಲ್ಲಿ ನಿರ್ಮಿಸುವ ಬಗ್ಗೆಯೂ ಯೋಜನೆ ರೂಪಿಸಲು ಡಿಸಿಎಂ ಸೂಚಿಸಿದ್ದಾರೆ. ಒಟ್ಟಾರೆ ಯೋಜನೆಯನ್ನು ರೂಪಿಸಿ, ಶೀಘ್ರವೇ ಅನುಷ್ಠಾನ ಮಾಡಲಾಗುತ್ತದೆ. ನಮ್ಮ ಮೆಟ್ರೊ ಮಾರ್ಗ ಕೂಡ ಇದೇ ಸುರಂಗದಲ್ಲಿ ಬಂದರೆ, ‘ಡಬಲ್‌ ಡೆಕ್‌’ ರೀತಿಯಲ್ಲಿ ಯೋಜನೆ ನಿರ್ಮಾಣವಾಗಲಿದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.