ADVERTISEMENT

ಬೆಂಗಳೂರು: ಒಂದೂವರೆ ಕಿ.ಮೀ. ಬೆನ್ನಟ್ಟಿ ಸರಗಳ್ಳನ ಹಿಡಿದ ಪೊಲೀಸ್ ಕಾನ್‌ಸ್ಟೆಬಲ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 15:29 IST
Last Updated 17 ಫೆಬ್ರುವರಿ 2026, 15:29 IST
   

ಬೆಂಗಳೂರು: ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಹೋಗುತ್ತಿದ್ದ ಸರಗಳ್ಳನನ್ನು ಪೊಲೀಸ್ ಕಾನ್‌ಸ್ಟೆಬಲ್‌ ಸುಮಾರು ಒಂದೂವರೆ ಕಿ.ಮೀ. ಬೆನ್ನಟ್ಟಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಮಣ್ಣ ಗಾರ್ಡನ್‌ ನಿವಾಸಿ ಸೈಯದ್ ಜಾಫರ್‌ (20) ಬಂಧಿತ ಆರೋಪಿ. ಮದ್ಯ ಕುಡಿಯುವ ಚಟ ಹೊಂದಿರುವ ಈತ, ಯೂಟ್ಯೂಬ್​ನಲ್ಲಿ ಕಳ್ಳತನದ ವಿಡಿಯೊ ನೋಡಿ ಕೃತ್ಯವೆಸಗಿದ್ದ ಎಂದು ಪೊಲೀಸರು ತಿಳಿಸಿದರು.

ಫೆಬ್ರುವರಿ 5ರ ಸಂಜೆ 7.20ರ ಸುಮಾರಿನಲ್ಲಿ ದಾಕ್ಷಾಯಿಣಿ ಎಂಬುವವರು ಕೆಲಸ ಮುಗಿಸಿಕೊಂಡು ವಿಜಯನಗರದ ಹಂಪಿನಗರ 8ನೇ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆ ವೇಳೆ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿ, 40 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ.

ADVERTISEMENT

ತಕ್ಷಣ ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅದೇ ಸಮಯಕ್ಕೆ ಮನೆಯಿಂದ ವಿಜಯನಗರ ಪೊಲೀಸ್ ಠಾಣೆಗೆ ಹೋಗುತ್ತಿದ್ದ ಪೊಲೀಸ್ ಕಾನ್‌ಸ್ಟೆಬಲ್ ಹಣಮಂತ ಪುಟಾಣಿ, ಇದನ್ನು ಗಮನಿಸಿ ಆರೋಪಿಯನ್ನು ಬೆನ್ನಟ್ಟಿ, ಹಿಡಿದು ₹6 ಲಕ್ಷ ಮೌಲ್ಯದ ಸರವನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಸಾರ್ವಜನಿಕರ ಸಹಾಯದೊಂದಿಗೆ ಆರೋಪಿಯನ್ನು ಠಾಣೆಗೆ ಒಪ್ಪಿಸಿದ್ದಾರೆ.

ಹಣಮಂತ ಪುಟಾಣಿ ಅವರ ಕಾರ್ಯಕ್ಷಮತೆಯನ್ನು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಶ್ಲಾಘಿಸಿ, ಪ್ರಶಂಸನಾ ಪತ್ರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.