ADVERTISEMENT

ಕೊರೊನಾ ಎದುರಿಸಲು ಇರಲಿ ಮನೋಬಲ: ಇಲ್ಲಿದೆ ತಜ್ಞರ ಸಲಹೆ

ಖಿನ್ನತೆಗೆ ಒಳಗಾದರೆ ರೋಗನಿರೋಧಕ ಶಕ್ತಿ ಕುಂಠಿತ * ದೈಹಿಕ ಆರೋಗ್ಯದ ಜತೆ ಮಾನಸಿಕ ಆರೋಗ್ಯವೂ ಮುಖ್ಯ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 20:10 IST
Last Updated 29 ಮಾರ್ಚ್ 2020, 20:10 IST
ಡಾ. ರಜನಿ ಪಿ.
ಡಾ. ರಜನಿ ಪಿ.   

ಬೆಂಗಳೂರು: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ದೈಹಿಕ ಆರೋಗ್ಯದ ಜತೆಗೆ, ಮಾನಸಿಕ ಆರೋಗ್ಯವನ್ನೂ ಸ್ಥಿಮಿತದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ...ಇದು ಹಲವು ಮನೋರೋಗ ತಜ್ಞರ ಸಲಹೆ.

ಇಂಥ ಸಲಹೆ, ಎಚ್ಚರಿಕೆ ನಡುವೆಯೂ ಅನೇಕರು ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗುತ್ತಿದ್ದಾರೆ. ಈಚೆಗೆ ರಾಜ್ಯದಲ್ಲಿ ಕೊರೊನಾ ಸೋಂಕಿನ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡ ಎರಡು ಪ್ರಕರಣಗಳು ಈ ಮಾತಿಗೆ ಸಾಕ್ಷಿಯಾಗುತ್ತವೆ.

ಇಂತಹ ಸಂದರ್ಭಗಳಲ್ಲಿ ಜನರು ಮಾನಸಿಕ ಸ್ವಾಸ್ಥ್ಯವನ್ನು ಹೇಗೆ ಕಾಯ್ದುಕೊಳ್ಳಬೇಕು?ಎಂಬ ಪ್ರಶ್ನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಮಾನಸಿಕ ಆರೋಗ್ಯ ವಿಭಾಗದಉಪ ನಿರ್ದೇಶಕಿಡಾ.ರಜನಿ ಪಿ. ಅವರ ಮುಂದಿಟ್ಟಾಗ, ‘ಪ್ರಜಾವಾಣಿ’ ಜತೆ ಅನೇಕ ಉಪಯುಕ್ತ ಮಾಹಿತಿ ಹಂಚಿಕೊಂಡರು. ಆ ಮಾಹಿತಿಯನ್ನು ಅವರ ಮಾತಿನಲ್ಲೇ ಕೇಳೋಣ.

ADVERTISEMENT

ರೋಗ ನಿರೋಧಕ ಶಕ್ತಿ ಮುಖ್ಯ: ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯ. ವಿಪರೀತ ಆತಂಕ, ಒತ್ತಡ ಮತ್ತು ಖಿನ್ನತೆಗೆ ಒಳಗಾದರೆ ನಮ್ಮ ರೋಗ ನಿರೋಧಕ ಶಕ್ತಿ ಕೂಡ ಕಡಿಮೆಯಾಗುತ್ತದೆ. ಮೊದಲು ಅದನ್ನು ಕಾಪಾಡಿಕೊಳ್ಳುವುದು ಮುಖ್ಯ.

ವಿದೇಶಗಳಿಂದ ರಾಜ್ಯಕ್ಕೆ ಬಂದು, ಪ್ರತ್ಯೇಕ ವಾಸದಲ್ಲಿರುವ (ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ ಮತ್ತು ಮನೆಯಲ್ಲಿ) ಕೋವಿಡ್‌ –19 ಶಂಕಿತರು ಮತ್ತು ಸೋಂಕಿತರೊಂದಿಗೆ ಮಾರ್ಚ್‌ 7ರಿಂದಲೇ ದೂರವಾಣಿಯಲ್ಲಿ ಸಮಾಲೋಚನೆ ಆರಂಭಿಸಿದ್ದೇವೆ. 15 ದಿನಗಳಲ್ಲಿ ರಾಜ್ಯದಾದ್ಯಂತದೂರವಾಣಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಬಾರಿ ಸಮಾಲೋಚನೆ ನಡೆಸಲಾಗಿದೆ. ಈ ಕೆಲಸ ಇನ್ನೂ ನಡೆಯುತ್ತಿದೆ.

ಸೌಜನ್ಯದಿಂದ ವರ್ತಿಸಿ: ಶಂಕಿತ ಸೋಂಕಿತರು ಮತ್ತು ಸೋಂಕಿತರ ಜೊತೆ ಎಚ್ಚರಿಕೆ, ಸೌಜನ್ಯದಿಂದ ವರ್ತಿಸಬೇಕು. ಇಲ್ಲದಿದ್ದರೆ ಅವರ ಮನೋಸ್ಥೈರ್ಯ ಕುಗ್ಗುತ್ತದೆ. ಸೋಂಕಿತರಿಗೆ ದೈಹಿಕ ಚಿಕಿತ್ಸೆಯ ಜೊತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಇದರೊಂದಿಗೆ ಆತಂಕ ನಿವಾರಣೆ ಚಿಕಿತ್ಸೆ ಕೂಡ ಮುಖ್ಯವಾಗುತ್ತದೆ. ಜನರು ಎಂತಹದ್ದೇ ಸಂದರ್ಭದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಹೀಗಾಗಿ ಶಂಕಿತರು, ಸೋಂಕಿತರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ಇದರಿಂದ ಸೋಂಕಿತರಲ್ಲಿ ಆಶ್ಚರ್ಯಕರ ಚೇತರಿಕೆ ಕಂಡುಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಪರೀತ ಹಾಗೂ ತರಹೆವಾರಿ ಮಾಹಿತಿ ಜನರಲ್ಲಿ ಭಯ ಬಿತ್ತುತ್ತಿವೆ. ಸರಿಯಾದ ಮಾಹಿತಿ ಕೊರತೆಯೂ ಜನರನ್ನು ಆತಂಕಕ್ಕೆ ದೂಡುತ್ತಿದೆ. ಮನದಲ್ಲಿ ಮನೆ ಮಾಡಿರುವ ‘ಕೊರೊನಾ ಎಂದರೆ ಸಾವು’ ಎಂಬ ತಪ್ಪು ಕಲ್ಪನೆಯನ್ನು ಜನರು ಮೊದಲು ಕಿತ್ತು ಹಾಕಬೇಕಿದೆ.ಎಲ್ಲ ಕೆಮ್ಮು, ನೆಗಡಿ, ಜ್ವರ ಕೋವಿಡ್‌ ಅಲ್ಲ ಎಂದು ಮೊದಲು ತಿಳಿದುಕೊಳ್ಳಬೇಕು.

ಕೊರೊನಾ ಸೋಂಕು ತಗುಲಿದರೂಶೇ81ರಷ್ಟು ಜನರು ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ರೋಗ ನಿರೋಧಕಶಕ್ತಿ ಇದ್ದರೆ ಸೋಂಕು ತನ್ನಷ್ಟಕ್ಕೇ ತಾನಾಗಿಯೇ ಹೊರಟು ಹೋಗುತ್ತದೆ. ಶೇ 14ರಷ್ಟು ಜನರಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿರುತ್ತದೆ. ಉಳಿದ ಶೇ 4ರಷ್ಟು ಜನರಿಗೆ ಮಾತ್ರ ಕೃತಕ ಉಸಿರಾಟ ವ್ಯವಸ್ಥೆ ಅಗತ್ಯವಿರುತ್ತದೆ. ಸೋಂಕು ತಗುಲಿ ಬದುಕುಳಿದವರು ಸಾಕಷ್ಟು ಜನರಿದ್ದಾರೆ.

ಸಕಾರಾತ್ಮಕ ಚಿಂತನೆ ಅಗತ್ಯ: ಸದಾ ಸಕಾರಾತ್ಮಕ ಚಿಂತನೆ ಮತ್ತು ಕ್ರಿಯಾಶೀಲತೆ ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸಮಯ ಕಳೆಯಲು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮಯವನ್ನು ಸಕಾರಾತ್ಮಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಆದಷ್ಟೂ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯಲು ಇದು ಸಕಾಲ.

*
ತಮ್ಮಿಂದ ಕುಟುಂಬ ಸದಸ್ಯರು, ಆಪ್ತರು, ಸಮುದಾಯಕ್ಕೆ ಸೋಂಕು ತಗುಲಿರಬಹುದು ಎಂಬ ಆತಂಕ ಸೋಂಕಿತರನ್ನು ಕಾಡುತ್ತಿರುತ್ತದೆ. ಇದು ಮಾನಸಿಕ ಕ್ಷೋಭೆ, ಖಿನ್ನತೆಗೆ ನಾಂದಿ ಹಾಡುತ್ತದೆ. ಸದಾ ಬೇಜಾರು, ಏಕಾಂಗಿತನ, ವಿಪರೀತ ಆತಂಕ, ಭೀತಿ ಕಾಡಲು ಶುರುವಾದರೆ ಕೂಡಲೇ ಹತ್ತಿರದ ಮನೋ ವೈದ್ಯರನ್ನು ಕಾಣುವುದು ಸೂಕ್ತ. ಈ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ರಹಸ್ಯವಾಗಿಡಲಾಗುತ್ತದೆ.
-ಡಾ. ರಜನಿ ಪಿ. ಉಪ ನಿರ್ದೇಶಕಿ, ಮಾನಸಿಕ ಆರೋಗ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.