ADVERTISEMENT

ಲಾಕ್‌ಡೌನ್: ರಸ್ತೆಗಿಳಿದ ಸವಾರರಿಗೆ ಲಾಠಿ ರುಚಿ: 2,227 ವಾಹನ ಜಪ್ತಿ

​ಪ್ರಜಾವಾಣಿ ವಾರ್ತೆ
Published 9 ಮೇ 2021, 21:15 IST
Last Updated 9 ಮೇ 2021, 21:15 IST
ಸ್ಯಾಟಲೈಟ್‌ ಬಸ್‌ ನಿಲ್ದಾಣದ ಬಳಿ ಭಾನುವಾರ ಅನಗತ್ಯವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಪೊಲೀಸ್ ಅಧಿಕಾರಿ ಲಾಠಿ ಬೀಸಿದರು –ಪ್ರಜಾವಾಣಿ ಚಿತ್ರ
ಸ್ಯಾಟಲೈಟ್‌ ಬಸ್‌ ನಿಲ್ದಾಣದ ಬಳಿ ಭಾನುವಾರ ಅನಗತ್ಯವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಪೊಲೀಸ್ ಅಧಿಕಾರಿ ಲಾಠಿ ಬೀಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ವಾಹನ ಸಂಚಾರಕ್ಕೆ ನಿರ್ಬಂಧವಿದ್ದರೂ ಅನಗತ್ಯವಾಗಿ ಭಾನುವಾರ ರಸ್ತೆಗಿಳಿದಿದ್ದ2,227 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಸೋಮವಾರದಿಂದ ಲಾಕ್‌ಡೌನ್ ಜಾರಿಯಾಗುವ ಭೀತಿಯಿಂದ ಜನ ಅಗತ್ಯ ವಸ್ತುಗಳ ಖರೀದಿ ಹಾಗೂ ಊರುಗಳನ್ನು ತಲುಪಲು ವಾಹನಗಳಲ್ಲಿ ಬಂದಿದ್ದರು. ಆದರೆ, ಬೆಳಿಗ್ಗೆ 10 ಗಂಟೆ ನಂತರದ ನಿರ್ಬಂಧಿತ ಅವಧಿಯಲ್ಲೂ ಸಂಚರಿಸುತ್ತಿದ್ದ 1,984 ದ್ವಿಚಕ್ರ ವಾಹನಗಳು, 99 ತ್ರಿಚಕ್ರ ವಾಹನ ಹಾಗೂ 144 ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಮಾಡಿದ್ದು, ಎನ್‌ಡಿಎಂಎ ಕಾಯ್ದೆಯಡಿ 23 ಪ್ರಕರಣಗಳನ್ನು ದಾಖಲಿಸಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.

ಲಸಿಕೆ: ಸಂದೇಶ ಕಡ್ಡಾಯ
ಬೆಂಗಳೂರು:
ರಾಜ್ಯದ ನಿಗದಿತ ಕೇಂದ್ರಗಳಲ್ಲಿ ಸೋಮವಾರದಿಂದ (ಮೇ 10) 18 ರಿಂದ 44 ವಯೋಮಾನದವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಈಗಾಗಲೇ ನೋಂದಣಿ ಮಾಡಿಕೊಂಡವರು ತಮಗೆ ಬಂದಿರುವ ಮೊಬೈಲ್‌ ಸಂದೇಶವನ್ನು (ಎಸ್‌ಎಂಎಸ್‌) ಪೊಲೀಸರಿಗೆ ತೋರಿಸಿ ಲಸಿಕೆ ಪಡೆಯಲು ತೆರಳಬಹುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ADVERTISEMENT

ಲಸಿಕೆ ಪಡೆಯಲು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರ (18 ರಿಂದ 44) ಮೊಬೈಲ್‌ಗೆ ಲಸಿಕೆ ಪಡೆಯಬೇಕಾದ ದಿನ ಮತ್ತು ಸಮಯ ಇರುವ ಸಂದೇಶ (ಎಸ್‌ಎಂಎಸ್‌) ಬಂದಿರುತ್ತದೆ. ಇದನ್ನು ಪರಿಶೀಲಿಸಿದ ನಂತರವಷ್ಟೇ ಪೊಲೀಸರು ಲಸಿಕಾ ಕೇಂದ್ರಗಳಿಗೆ ತೆರಳಲು ಅನುಮತಿ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಪೊಲೀಸರ ದೌರ್ಜನ್ಯ ತಡೆಯಿರಿ’
ಬೆಂಗಳೂರು: ‘ತುರ್ತು ಕಾರ್ಯಗಳ ನಿಮಿತ್ತ ಮನೆಯಿಂದ ಹೊರಗಡೆ ಬಂದವರ ಮೇಲೆ ಕೂಡ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಇದನ್ನು ತಡೆಯಲು ಗೃಹ ಸಚಿವರು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕರ್ನಾಟಕ ವಿಕಾಸ ರಂಗ ಆಗ್ರಹಿಸಿದೆ.

‘ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್ ಬಿಗಿಗೊಳಿಸಿರುವುದು ಸ್ವಾಗತಾರ್ಹ. ಆದರೆ, ತುರ್ತು ಕಾರ್ಯಕ್ಕಾಗಿ ಹೊರಗಡೆ ಬಂದವರ ಮೇಲೆ ಕೂಡ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ಓಡಾಟ ನಡೆಸುತ್ತಿರುವವರ ಮೇಲೆ ಪ್ರಕರಣ ದಾಖಲಿಸಿ, ಕ್ರಮಕೈಗೊಳ್ಳಲಿ. ಅಮಾಯಕರ ಮೇಲೆ ದಾಳಿ ನಡೆಸುವುದು ಸರಿಯಲ್ಲ’ ಎಂದು ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.