ADVERTISEMENT

ಕೋವಿಡ್ ಚಿಕಿತ್ಸೆ: ಹಾಸಿಗೆ ಹೆಚ್ಚಳಕ್ಕೆ ಹರಸಾಹಸ, ಬಿಬಿಎಂಪಿ ಸಾಲು ಸಾಲು ಸಭೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 21:12 IST
Last Updated 14 ಏಪ್ರಿಲ್ 2021, 21:12 IST

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಳ ಕಾಣಿಸುತ್ತಿರುವುದು, ಸೋಂಕಿತರ ಚಿಕಿತ್ಸೆಗೆ ಹಾಸಿಗೆಗಳ ತೀವ್ರ ಕೊರತೆ ಉಂಟಾಗುವ ಆತಂಕ ಸೃಷ್ಟಿಸಿದೆ. ಹಾಗಾಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗೆ ಹಾಸಿಗೆಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಬಿಬಿಎಂಪಿ ಹರಸಾಹಸ ಪಡುತ್ತಿದೆ.

ಇದುವರೆಗೆ 100ಕ್ಕಿಂತ ಹೆಚ್ಚು ಹಾಸಿಗೆ ಸಾಮರ್ಥ್ಯವಿರುವ ಆಸ್ಪತ್ರೆಗಳು ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಕಾಯ್ದಿರಿಸುವುದನ್ನು ಬಿಬಿಎಂಪಿ ಕಡ್ಡಾಯಗೊಳಿಸಿತ್ತು. ಈಗ 50ಕ್ಕಿಂತ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಗಳಲ್ಲೂ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಕಾಯ್ದಿರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಬುಧವಾರ ಸರ್ಕಾರಿ ರಜಾದಿನವಾಗಿದ್ದರೂ ಬಿಬಿಎಂಪಿ ಅಧಿಕಾರಿಗಳು ಕೋವಿಡ್‌ ನಿಯಂತ್ರಣಕ್ಕೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಸಾಲು ಸಾಲು ಸಭೆ ನಡೆಸುವುದರಲ್ಲಿ ತಲ್ಲೀನರಾಗಿದ್ದರು. ಕೋವಿಡ್‌ ಪ್ರಕರಣಗಳ ನಿಯಂತ್ರಣಕ್ಕೆ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪಾಲಿಕೆಯ ಉನ್ನತ ಅಧಿಕಾರಿಗಳು ಸಮಾಲೋಚನೆ ನಡೆಸಿದರು.

ADVERTISEMENT

‘ಕೋವಿಡ್‌ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಅನೇಕ ಸಭೆಗಳನ್ನು ನಡೆಸಿದ್ದೇವೆ. ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ನೀಗಿಸುವುದು, ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಸಮಸ್ಯೆ ಅಗದಂತೆ ಕ್ರಮ ಕೈಗೊಳ್ಳುವುದು, ಕೋವಿಡ್‌ ಸೋಂಕಿತರ ಆರೈಕೆ ಕೇಂದ್ರಗಳ ಸಾಮರ್ಥ್ಯ ಹೆಚ್ಚಳ, ವಾರ್‌ ರೂಂನಲ್ಲಿ ತರಬೇಕಾದ ಸುಧಾರಣೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಕೋವಿಡ್‌ ಚಿಕಿತ್ಸೆಗೆ ಹಾಸಿಗೆ ಹಂಚಿಕೆಯ ಮಾಹಿತಿ ನೀಡುವ ಕೇಂದ್ರೀಕೃತ ಪೋರ್ಟಲ್‌ನಲ್ಲಿ ಕೆಲವೊಂದು ಮಾರ್ಪಾಡು ಮಾಡಲಿದ್ದೇವೆ. ಇದುವರೆಗೆ 100ಕ್ಕಿಂತ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಗಳ ಮಾಹಿತಿ ಮಾತ್ರ ಇದರಲ್ಲಿ ಸಿಗುತ್ತಿತ್ತು. ಇನ್ನು 50ಕ್ಕಿಂತ ಹೆಚ್ಚು ಹಾಸಿಗೆಗಳಿರುವ ಆಸ್ಪತ್ರೆಗಳ ಮಾಹಿತಿಯೂ ಇದರಲ್ಲಿ ಸಿಗಲಿದೆ. 50ಕ್ಕಿಂತ ಅಧಿಕ ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಗಳೂ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಶೇ 50ರಷ್ಟು ಆಸ್ಪತ್ರೆಯನ್ನು ಕಾಯ್ದರಿಸುವುದು ಕಡ್ಡಾಯ’ ಎಂದರು.

‘ಕಂಟೈನ್‌ಮೆಂಟ್‌ ವಲಯಗಳನ್ನು ಗುರುತಿಸುವುದರಲ್ಲಿ ಯಾವುದೇ ಮಾರ್ಪಾಡು ಮಾಡುತ್ತಿಲ್ಲ. ಒಂದೇ ಕಡೆ 5ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬರುವ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯ ಎಂದು ಗುರುತಿಸಿ, ಅಲ್ಲಿಂದ ಬೇರೆ ಕಡೆಗೆ ಸೊಂಕು ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದ್ದೇವೆ’ ಎಂದರು.

‘ಆಂಬುಲೆನ್ಸ್‌ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಿದ್ದೇವೆ. ಸಹಾಯವಾಣಿಯಲ್ಲೂ ಸುಧಾರಣೆ ತರಲಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.