ADVERTISEMENT

ನಕಲಿ ಕೀ ಬಳಸಿ ಸಂಬಂಧಿ ಮನೆಯಲ್ಲೇ ಕಳವು; ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 15:42 IST
Last Updated 19 ಡಿಸೆಂಬರ್ 2020, 15:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಕಲಿ ಕೀ ಬಳಸಿ ಸಂಬಂಧಿ ಮನೆಯಲ್ಲೇ ಕಳವು ಮಾಡಿದ್ದ ಆರೋಪದಡಿ ಇಮ್ರಾನ್ ಅಹಮ್ಮದ್ (30) ಹಾಗೂ ಅವರ ಇಬ್ಬರು ಸಹಚರರನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

‘ಬಿಸ್ಮಿಲ್ಲಾನಗರದ ನಿವಾಸಿ ಇಮ್ರಾನ್, ಹೊಂಗಸಂದ್ರದ ಸೈಯದ್ ಜಮೀರ್ ಅಹಮ್ಮದ್ (28) ಹಾಗೂ ಬಿಟಿಎಂ 1ನೇ ಹಂತದ ಅತಿಕ್ ಪಾಷಾ (31) ಜೊತೆ ಸೇರಿ ಕೃತ್ಯ ಎಸಗಿದ್ದರು. ಮೂವರನ್ನೂ ಬಂಧಿಸಿ, ₹ 4.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹5,000 ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಿಸ್ಮಿಲ್ಲಾನಗರದ 4ನೇ ಮುಖ್ಯರಸ್ತೆಯಲ್ಲಿರುವ ಸಲೀಂ ಪಾಷಾ ಎಂಬುವರ ಮನೆಗೆ ಡಿ. 14ರಂದು ನುಗ್ಗಿದ್ದ ಆರೋಪಿಗಳು, ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಸಲೀಂ ಪಾಷಾ ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಸಂಬಂಧಿಯೇ ಆಗಿದ್ದ ಇಮ್ರಾನ್‌ ಅವರೇ ಆರೋಪಿ ಎಂಬುದು ತಿಳಿಯಿತು’ ಎಂದೂ ತಿಳಿಸಿದರು.

ADVERTISEMENT

‘ಸಲೀಂ ಪಾಷಾ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಆರೋಪಿ ಇಮ್ರಾನ್, ಚಿನ್ನಾಭರಣ ಹಾಗೂ ನಗದು ಇರುವುದನ್ನು ನೋಡಿದ್ದರು. ಇತ್ತೀಚೆಗೆ ಮನೆಗೆ ಹೋಗಿದ್ದ ಇಮ್ರಾನ್, ಮನೆ ಕೀ ಕದ್ದು ನಕಲಿ ಕೀ ಮಾಡಿಸಿಟ್ಟುಕೊಂಡಿದ್ದರು. ಸಲೀಂಪಾಷಾ ಕುಟುಂಬಸ್ಥರು ಮನೆಯಲ್ಲಿ ಇಲ್ಲದಿರುವುದನ್ನು ತಿಳಿದುಕೊಂಡೇ ಆರೋಪಿಗಳು ಕೃತ್ಯ ಎಸಗಿದ್ದರು’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.