ADVERTISEMENT

Bengaluru: ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ‘ಸ್ಪೆಷಾಲಿಟಿ’ಸೇವೆಗೆ ಪ್ರತ್ಯೇಕ ಕಟ್ಟಡ

ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಕಟ್ಟಡ ನಿರ್ಮಾಣಕ್ಕೆ ಸಿಐಎಲ್ ಕ್ರಮ

ವರುಣ ಹೆಗಡೆ
Published 9 ಫೆಬ್ರುವರಿ 2026, 0:30 IST
Last Updated 9 ಫೆಬ್ರುವರಿ 2026, 0:30 IST
ಇಂದಿರಾನಗರದಲ್ಲಿರುವ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯ ಹೊರನೋಟ
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಇಂದಿರಾನಗರದಲ್ಲಿರುವ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯ ಹೊರನೋಟ ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್   

ಬೆಂಗಳೂರು: ಇಂದಿರಾನಗರದಲ್ಲಿರುವ ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯು ಸೂಪರ್‌ ಸ್ಪೆಷಾಲಿಟಿ ಸೇವೆಗೆ ತೆರೆದುಕೊಳ್ಳಲು ಸಜ್ಜಾಗುತ್ತಿದ್ದು, ಆಸ್ಪತ್ರೆಯ ಆವರಣದಲ್ಲಿ ಪ್ರತ್ಯೇಕ ಕಟ್ಟಡ ತಲೆಯೆತ್ತಲಿದೆ. 

ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಈ ಆಸ್ಪತ್ರೆ, ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿದೆ. 250 ಹಾಸಿಗೆಗಳ ಈ ಆಸ್ಪತ್ರೆಗೆ ದಿನಕ್ಕೆ 500ರಿಂದ 600 ಹೊರರೋಗಿಗಳು ಭೇಟಿ ನೀಡುತ್ತಾರೆ. ಆದರೆ, ಇಲ್ಲಿ ಸೂಪರ್‌ ಸ್ಪೆಷಾಲಿಟಿ ಸೇವೆ ಇಲ್ಲದ ಕಾರಣ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಸೇರಿ ರೋಗಿಯ ಕಾಯಿಲೆ ಆಧರಿಸಿ ಪ್ರಮುಖ ವೈದ್ಯಕೀಯ ಸಂಸ್ಥೆಗಳಿಗೆ ಶಿಫಾರಸು ಮಾಡಲಾಗುತ್ತಿತ್ತು. ಈಗ ಆಸ್ಪತ್ರೆಯು ತನ್ನ ಆವರಣದಲ್ಲಿ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್) ಪ್ರತ್ಯೇಕ ಬ್ಲಾಕ್ ನಿರ್ಮಾಣಕ್ಕೆ ಮುಂದಾಗಿದೆ. 

ಸೂಪರ್‌ ಸ್ಪೆಷಾಲಿಟಿ ಬ್ಲಾಕ್ ನಿರ್ಮಾಣಕ್ಕೆ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಸಂಸ್ಥೆಯು ಮುಂದೆ ಬಂದಿದೆ. ಇದರಿಂದಾಗಿ ಆಸ್ಪತ್ರೆಯ ಆವರಣದಲ್ಲಿ ಸ್ಥಳ ಗುರುತಿಸಲಾಗಿದೆ. 10 ಸಾವಿರ ಚದರ ಅಡಿಯಲ್ಲಿ ಈ ಕಟ್ಟಡ ತಲೆಯೆತ್ತಲಿದೆ. ಈ ಕಟ್ಟಡವನ್ನು ಸಿಐಎಲ್‌ ನಿರ್ಮಿಸಿ, ಅಗತ್ಯ ವೈದ್ಯರನ್ನೂ ಒದಗಿಸಲಿದೆ. ಸಿಎಸ್‌ಆರ್ ಅನುದಾನದಡಿ ನಿರ್ವಹಣಾ ವೆಚ್ಚವನ್ನೂ ಭರಿಸಲಿದೆ.  

ADVERTISEMENT

ನಾಲ್ಕು ವಿಭಾಗ:

ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ ನಾಲ್ಕು ವಿಭಾಗಗಳನ್ನು ಒಳಗೊಳ್ಳಲಿದೆ. ಹೃದಯ ವಿಜ್ಞಾನ, ನರ ವಿಜ್ಞಾನ, ಮೂತ್ರಪಿಂಡ–ಮೂತ್ರಕೋಶ ವಿಜ್ಞಾನ ಹಾಗೂ ಜಠರಗರುಳಿನ ವಿಜ್ಞಾನ ವಿಭಾಗಗಳು ಕಾರ್ಯನಿರ್ವಹಿಸಲಿವೆ. ನಾಲ್ಕೂ ವಿಭಾಗಗಳಲ್ಲಿ ಹೊರರೋಗಿ ವಿಭಾಗದ ಸೇವೆ ದೊರೆಯಲಿದ್ದು, ಪರ್ಯಾಯ ದಿನಗಳಲ್ಲಿ ವೈದ್ಯರು ಲಭ್ಯರಿರುತ್ತಾರೆ. ಕಟ್ಟಡವು ಒಂದು ಅಂತಸ್ತು ಹೊಂದಿರಲಿದ್ದು, 10 ಹಾಸಿಗೆಗಳನ್ನು ಒಳಗೊಳ್ಳಲಿದೆ. ಇಲ್ಲಿ ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳನ್ನು ನಡೆಸಿ, ವಾರ್ಡ್‌ಗಳಿಗೆ ಸ್ಥಳಾಂತರ ಮಾಡಲಾಗುತ್ತದೆ. 

‘ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ ನಿರ್ಮಾಣದಿಂದ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡದೆ, ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತದೆ. ಖಾಸಗಿ ವ್ಯವಸ್ಥೆಯಡಿ ವಿವಿಧ ಶಸ್ತ್ರಚಿಕಿತ್ಸೆಗಳು ದುಬಾರಿ ಆಗಿರುವುದರಿಂದ, ಸರ್ಕಾರಿ ವ್ಯವಸ್ಥೆಯಡಿ ಶಸ್ತ್ರಚಿಕಿತ್ಸೆಗೆ ರಾಜ್ಯದ ವಿವಿಧೆಡೆಯಿಂದ ರೋಗಿಗಳು ನಗರದ ವೈದ್ಯಕೀಯ ಸಂಸ್ಥೆಗಳಿಗೆ ಬರುತ್ತಾರೆ. ಇಲ್ಲಿ ಸೂಪರ್ ಸ್ಪೆಷಾಲಿಟಿ ಘಟಕ ನಿರ್ಮಾಣದಿಂದ ಆ ಸಂಸ್ಥೆಗಳ ಮೇಲಿನ ಭಾರವು ಕೊಂಚ ಇಳಿಯಲಿದೆ’ ಎಂದು ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ್ ಕೆ.ಎಸ್. ತಿಳಿಸಿದರು.

ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾದರೆ ನಾಲ್ಕೈದು ತಿಂಗಳಲ್ಲಿ ಪೂರ್ಣಗೊಂಡು ಇದೇ ವರ್ಷ ಸೇವೆ ದೊರೆಯಲಿದೆ. ಬಿಪಿಎಲ್ ಕುಟುಂಬದವರಿಗೆ ಉಚಿತವಾಗಿ ಚಿಕಿತ್ಸೆ ಲಭ್ಯವಾಗಲಿದೆ
ಡಾ.ರಾಜೇಶ್ ಕೆ.ಎಸ್. ವೈದ್ಯಕೀಯ ಅಧೀಕ್ಷಕ ಸರ್ ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆ 

ಕ್ಯಾಥ್ ಲ್ಯಾಬ್ ಅಳವಡಿಕೆ

ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯು ಕ್ಯಾಥ್‌ ಲ್ಯಾಬ್‌ ಅಳವಡಿಸಿಕೊಳ್ಳಲು ಮುಂದಾಗಿದೆ. ಈ ಸಂಬಂಧ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಜತೆಗೆ ಮಾತುಕತೆ ನಡೆಸಿದ್ದು ಸಂಸ್ಥೆಯ ಪ್ರತಿನಿಧಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿರುವ ಜಯದೇವ ಘಟಕದ ಮಾದರಿಯಲ್ಲಿಯೇ ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ಪ್ರತ್ಯೇಕ ಘಟಕ ನಿರ್ಮಾಣವಾಗುವ ಸಾಧ್ಯತೆಯಿದೆ. ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳನ್ನು ಪತ್ತೆ ಹಚ್ಚಲು ಹಾಗೂ ಚಿಕಿತ್ಸೆ ನೀಡಲು ಕ್ಯಾಥ್ ಲ್ಯಾಬ್ ಸಹಕಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.