ADVERTISEMENT

ಸ್ನೇಹಿತನ ಅರೆನಗ್ನ ವಿಡಿಯೊ ಚಿತ್ರಣ: ಬ್ಲ್ಯಾಕ್‌ಮೇಲ್ ಮಾಡಿ ಹಣ ಕಿತ್ತ ಯುವತಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 12:01 IST
Last Updated 16 ಜುಲೈ 2020, 12:01 IST

ಬೆಂಗಳೂರು: ಸ್ನೇಹಿತನ ಅರೆನಗ್ನ ವಿಡಿಯೊ ಚಿತ್ರೀಕರಿಸಿದ್ದ ಯುವತಿಯೊಬ್ಬಳು ಬ್ಲ್ಯಾಕ್‌ಮೇಲ್ ಮಾಡಿ ಹಣ ಕಿತ್ತಿದ್ದು, ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೃತ್ಯದ ಸಂಬಂಧ ಖಾಸಗಿ ಕಂಪನಿ ಉದ್ಯೋಗಿ ದೂರು ನೀಡಿದ್ದಾರೆ. ಅವರ ಸ್ನೇಹಿತೆಯಾದ ಯುವತಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮೊಬೈಲ್ ಆ್ಯಪ್‌ ಒಂದರಲ್ಲಿ ಖಾತೆ ತೆರೆದಿದ್ದ ದೂರುದಾರರಿಗೆ, ಆ್ಯಪ್‌ನಲ್ಲೇ ಯುವತಿ ಪರಿಚಯ ಆಗಿತ್ತು. ನಂತರ ಇಬ್ಬರೂ ಪರಸ್ಪರ ಮೊಬೈಲ್ ನಂಬರ್ ಬದಲಾಯಿಸಿಕೊಂಡು ಮಾತನಾಡುತ್ತಿದ್ದರು. ಸಲುಗೆ ಬೆಳೆದಿತ್ತು.’

ADVERTISEMENT

‘ಕೆಲದಿನಗಳ ಹಿಂದೆ ರಾತ್ರಿ ಸಮಯದಲ್ಲಿ ಇಬ್ಬರೂ ವಾಟ್ಸ್‌ಆ್ಯಪ್‌ನಲ್ಲಿ ಚಾಟಿಂಗ್ ಮಾಡುತ್ತಿದ್ದರು. ಅದೇ ವೇಳೆ ದೂರುದಾರ, ಅರೆನಗ್ನವಾಗಿ ಯುವತಿಗೆ ವಿಡಿಯೊ ಕಾಲ್ ಮಾಡಿದ್ದ. ಅದನ್ನೇ ಯುವತಿ ಚಿತ್ರೀಕರಿಸಿಟ್ಟುಕೊಂಡಿದ್ದಳು. ಕೆಲದಿನಗಳ ನಂತರ ಯುವತಿ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದಳು. ‘ನಾನು ಕೇಳಿದಷ್ಟು ಹಣ ಕೊಡಬೇಕು. ಇಲ್ಲದಿದ್ದರೆ ನಿನ್ನ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತೇನೆ’ ಎಂದಿದ್ದಳು. ಅದಕ್ಕೆ ಹೆದರಿದ್ದ ದೂರುದಾರ ₹22 ಸಾವಿರ ಕೊಟ್ಟಿದ್ದರು. ಅದಾದ ಬಳಿಕ ಯುವತಿ, ಪುನಃ ಹಣಕ್ಕೆ ಬೇಡಿಕೆ ಇಟ್ಟಿದ್ದಳು’ ಎಂದೂ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.