ಸೈಬರ್ ಅಪರಾಧ
ಬೆಂಗಳೂರು: ದೇಶದ ಸಿಲಿಕಾನ್ ಕಣಿವೆಯಾಗಿರುವ ಬೆಂಗಳೂರಿನಲ್ಲಿ, 2023ರಲ್ಲಿ ದೇಶದಲ್ಲೇ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪಟ್ಟಿಯಲ್ಲಿರುವ ನಂತರದ 10 ನಗರಗಳ ಒಟ್ಟು ಪ್ರಕರಣಗಳಿಗಿಂತ ಹೆಚ್ಚಿನ ಪ್ರಕರಣಗಳು ಬೆಂಗಳೂರಿನಲ್ಲಿಯೇ ನಡೆದಿವೆ.
ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ (ಎನ್ ಸಿ ಆರ್ ಬಿ) ಬಿಡುಗಡೆಗೊಳಿಸಿದ 2023ರ ದತ್ತಾಂಶದಿಂದ ಇದು ಬಹಿರಂಗಗೊಂಡಿದೆ.
ಅಂಕಿಅಂಶಗಳ ಪ್ರಕಾರ, 2023ರಲ್ಲಿ ಬೆಂಗಳೂರಿನಲ್ಲಿ 17,631 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. 2022ಕ್ಕೆ ಹೋಲಿಸಿದರೆ (9,940) ಶೇ 77.37ರಷ್ಟು ಏರಿಕೆಯಾಗಿದೆ. 2021ರಲ್ಲಿ ನಗರದಲ್ಲಿ 6,423 ಪ್ರಕರಣಗಳು ದಾಖಲಾಗಿವೆ.
ಇಂತಹ ಒಟ್ಟು ಅಪರಾಧ ಪ್ರಕರಣಗಳ ಪೈಕಿ, ಶೇ 54ರಷ್ಟು ಬೆಂಗಳೂರಿನಲ್ಲೇ ಜರುಗಿದ್ದು, ಹೈದರಾಬಾದ್, ಮುಂಬೈ, ದೆಹಲಿ ಹಾಗೂ ಲಖನೌ ಸೇರಿ ಈ ಪಟ್ಟಿಯಲ್ಲಿರುವ ಆನಂತರದ 10 ನಗರಗಳಲ್ಲಿ 14,494 ಪ್ರಕರಣಗಳು ದಾಖಲಾಗಿವೆ.
ಇಂತಹ ಪ್ರಕರಣಗಳಲ್ಲಿ ಶೇ 18.1ರಷ್ಟು ಮಾತ್ರ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಸೈಬರ್ ಅಪರಾಧ ಪತ್ತೆಹಚ್ಚುವಲ್ಲಿ ವೈಫಲ್ಯತೆಯನ್ನು ಎತ್ತಿ ತೋರಿಸುತ್ತಿದೆ. ಕಂಪ್ಯೂಟರ್ ಸಂಬಂಧ ದಾಖಲಾಗಿರುವ ಅಪರಾಧಗಳಲ್ಲಿ 16,116 ಪ್ರಕರಣಗಳು ಮೋಸದ ಸೋಗಿನಲ್ಲಿ ನಡೆದಿದೆ.
2023ರಲ್ಲಿ ಕರ್ನಾಟಕದಲ್ಲಿ ನಡೆದ 21,889 ಪ್ರಕರಣಗಳ ಪೈಕಿ ಶೇ 18.1ರಲ್ಲಿ ಮಾತ್ರ ಆರೋಪಪಟ್ಟಿ ದಾಖಲಾಗಿದೆ. ಈ ಪೈಕಿ 18,602 ಕೃತ್ಯಗಳು ಮೋಸದ ಸೋಗಿನಲ್ಲಿ ಎಸಗಲಾಗಿದೆ.
ತೆಲಂಗಾಣದಲ್ಲಿ 18,236, ಉತ್ತರ ಪ್ರದೇಶದಲ್ಲಿ 10,794 ಪ್ರಕರಣಗಳು ದಾಖಲಾದರೆ, ಈ ರಾಜ್ಯಗಳಲ್ಲಿ ಆರೋಪ ಪಟ್ಟಿ ದಾಖಲಾಗದ ಪ್ರಮಾಣ ಕ್ರಮವಾಗಿ ಶೇ 20.9 ಹಾಗೂ ಶೇ 45.6ರಷ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.