ADVERTISEMENT

ದೀಪಾವಳಿ: ಪಟಾಕಿ ಬಿಡಿ, ಆಟ ಆಡಿ

ಸಕ್ಕರೆನಾಡು ರೋಟರಿ ಸಂಸ್ಥೆಯಿಂದ ಮಕ್ಕಳಿಗೆ ಕ್ರೀಡಾ ಸಾಮಗ್ರಿ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 20:28 IST
Last Updated 8 ನವೆಂಬರ್ 2018, 20:28 IST
ರೋಟರಿ ಕ್ಲಬ್‌ ಆಫ್‌ ಸಕ್ಕರೆನಾಡು ಸಂಸ್ಥೆಯ ಸದಸ್ಯರು ಗುರುವಾರ ಮಂಡ್ಯದ ಬಾಲಮಂದಿರದ ಮಕ್ಕಳಿಗೆ ಕ್ರೀಡಾ ಪರಿಕರ ವಿತರಣೆ ಮಾಡಿದರು
ರೋಟರಿ ಕ್ಲಬ್‌ ಆಫ್‌ ಸಕ್ಕರೆನಾಡು ಸಂಸ್ಥೆಯ ಸದಸ್ಯರು ಗುರುವಾರ ಮಂಡ್ಯದ ಬಾಲಮಂದಿರದ ಮಕ್ಕಳಿಗೆ ಕ್ರೀಡಾ ಪರಿಕರ ವಿತರಣೆ ಮಾಡಿದರು   

ಮಂಡ್ಯ: ಮಾಲಿನ್ಯ ಮುಕ್ತ ದೀಪಾವಳಿ ಹಬ್ಬ ಆಚರಣೆ ಅಂಗವಾಗಿ ‘ಪಟಾಕಿ ಬಿಡಿ, ಆಟ ಆಡಿ’ ಘೋಷಣೆಯ ಅಡಿ ರೋಟರಿ ಕ್ಲಬ್‌ ಆಫ್‌ ಸಕ್ಕರೆನಾಡು ಸಂಸ್ಥೆಯ ಸದಸ್ಯರು ಗುರುವಾರ ಬಾಲಮಂದಿರದ ಮಕ್ಕಳಿಗೆ ಕ್ರೀಡಾ ಪರಿಕರ ವಿತರಣೆ ಮಾಡಿದರು.

ಮಕ್ಕಳಿಗೆ ಕ್ರಿಕೆಟ್‌ ಬ್ಯಾಟ್‌, ಬಾಲ್‌, ಷಟಲ್‌ ಬ್ಯಾಟ್‌, ಕಾಕ್‌, ಟೆನಿಕಾಯ್ಟ್‌ , ಚೆಸ್‌ ಬೋರ್ಡ್‌, ಕೇರಂ ಬೋರ್ಡ್‌, ವಾಲಿಬಾಲ್‌, ಫುಟ್‌ಬಾಲ್‌, ಸ್ಕಿಪ್ಪರ್‌ ಹಾಗೂ ಇತರ ಪರಿಕರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ ಆಫ್‌ ಸಕ್ಕರೆನಾಡು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ. ಮಹೇಶ್‌ ಮಾತನಾಡಿ ‘ಪಟಾಕಿ ಹಚ್ಚುವ ಮೂಲಕ ದೀಪಾವಳಿ ಹಬ್ಬ ಆಚರಣೆ ಮಾಡುವುದನ್ನು ತ್ಯಜಿಸಬೇಕು. ಸಮಾಜದಲ್ಲಿ ಮಕ್ಕಳಿಂದ ಮಾತ್ರ ಈ ಬದಲಾವಣೆ ಸಾಧ್ಯ. ನಾವು ನಮ್ಮ ಮನೆಯ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಿ ಪಟಾಕಿ ಹಚ್ಚದಂತೆ ಅವರ ಮನಸ್ಸು ಬದಲಾಯಿಸಬೇಕು. ನಂತರ ಬೇರೆ ಮಕ್ಕಳಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

‘ಪರಿಸರ ಸಂರಕ್ಷಣೆ ಹಾದಿಯಲ್ಲಿ ಪಟಾಕಿ ಹಚ್ಚದೇ ದೀಪಾವಳಿ ಆಚರಣೆ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಪಟಾಕಿ ಹಚ್ಚುವುದರಿಂದ ಗಾಳಿ, ನೀರು, ಶಬ್ದ ಮಾಲಿನ್ಯವಾಗುವ ಅಪಾಯ ಇದೆ. ಜೊತೆಗೆ ಪ್ರಾಣಿ, ಪಕ್ಷಿಗಳ ಪ್ರಾಣಕ್ಕೂ ಕುತ್ತು ಬರುತ್ತದೆ. ಪಟಾಕಿ ಕೊಳ್ಳಲು ಅನವಶ್ಯಕವಾಗಿ ಹಣ ಖರ್ಚು ಮಾಡಬೇಕಾಗಿದೆ. ಪರಿಸರ ಸಂರಕ್ಷಣೆ ಹಾಗೂ ಹಣದ ದುರುಪಯೋಗ ತಡೆಯುವುದಕ್ಕಾಗಿ ಪಟಾಕಿ ಜೊತೆ ದೀಪಾವಳಿ ಹಬ್ಬ ಆಚರಣೆ ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಲು ಮುಂದಾಗಬೇಕು. ಆರೋಗ್ಯಯುತ ಹಾಗೂ ಮಾಲಿನ್ಯ ರಹಿತ ಸಮಾಜ ನಿರ್ಮಾಣ ಮಾಡಲು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ADVERTISEMENT

ಸಂಸ್ಥೆ ಅಧ್ಯಕ್ಷ ಪ್ರಶಾಂತ್, ಸದಸ್ಯರಾದ ಬಿ.ಟಿ.ರಾಮು, ಜಿ.ಜಿ.ಸತೀಶ್‌ಕುಮಾರ್, ಡಿ.ಎಂ.ರಮೇಶ್, ಸೊಹೇಲ್‌ ಅಹಮದ್, ರಂಜಿತ್‌ಸಿಂಗ್, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.