ADVERTISEMENT

ದೀಪಾವಳಿಗೆ ಇಳಿದ ಹೂವು, ಹಣ್ಣಿನ ದರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 19:44 IST
Last Updated 26 ಅಕ್ಟೋಬರ್ 2019, 19:44 IST
ನಗರದ ಗಾಂಧಿ ಬಜಾರ್‌ನಲ್ಲಿ ಶನಿವಾರ ಹೂವು ಖರೀದಿಯಲ್ಲಿ ತೊಡಗಿದ್ದ ಜನ –ಪ್ರಜಾವಾಣಿ ಚಿತ್ರ
ನಗರದ ಗಾಂಧಿ ಬಜಾರ್‌ನಲ್ಲಿ ಶನಿವಾರ ಹೂವು ಖರೀದಿಯಲ್ಲಿ ತೊಡಗಿದ್ದ ಜನ –ಪ್ರಜಾವಾಣಿ ಚಿತ್ರ   

ಬೆಂಗಳೂರು: ದೀಪಾವಳಿ ವೇಳೆಗೆ ಗಗನಕ್ಕೇರುತ್ತಿದ್ದ ಹೂವಿನ ದರ ಈ ಬಾರಿ ಮಳೆಯ ಕಾರಣಕ್ಕೆ ತುಸು ಇಳಿಕೆಯಾಗಿದೆ. ಹಣ್ಣಿನ ಬೆಲೆಯೂ ತಟಸ್ಥವಾಗಿದ್ದು, ಗ್ರಾಹಕರ ಸಡಗರ ಹೆಚ್ಚಾಗಿದೆ.

ಹಬ್ಬಗಳ ವೇಳೆಸಾಮಾನ್ಯವಾಗಿ ಗುಲಾಬಿ, ಚೆಂಡು ಹೂವು, ಮಲ್ಲಿಗೆ, ಕನಕಾಂಬರ ದೀಪಾವಳಿಗೆ ಕೊಂಚ ದುಬಾರಿಯೇ ಆಗಿರುತ್ತಿತ್ತು. ಬೆಲೆ ಏರಿಕೆಯಿಂದಾಗಿ ಗ್ರಾಹಕರು ಖರೀದಿಗೆ ಹಿಂಜರಿಯುತ್ತಿದ್ದರು. ಆದರೆ, ಈ ದೀಪಗಳ ಹಬ್ಬಕ್ಕೆ ಹೂವು, ಹಣ್ಣಿನ ದರಗಳು ಸ್ಥಿರವಾಗಿದ್ದು, ಹಬ್ಬದ ಮೆರುಗು ದುಪ್ಪಟ್ಟಾಗಲಿದೆ.

ದೀಪಾವಳಿ ಹೊತ್ತಿಗೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಸೇವಂತಿಗೆ ಹೂವಿನ ದರ ಕಳೆದ ವಾರ ಸುರಿದ ಭಾರಿ ಮಳೆಯಿಂದ ದಿಢೀರ್‌ ಕುಸಿದಿದ್ದು, ಶನಿವಾರ ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹10ರಿಂದ ₹40ರಂತೆ ಮಾರಾಟವಾಯಿತು.

ADVERTISEMENT

‘ರಾಜ್ಯದಲ್ಲಿ ಕಳೆದ ವಾರವೆಲ್ಲ ಭಾರಿ ಮಳೆ ಸುರಿದ ಕಾರಣ ಹೂಗಳು ಹಾಳಾಗಿವೆ. ಸೇವಂತಿಗೆ ಹೂವು ಮಳೆಗೆ ಹೆಚ್ಚು ತಡೆಯುವುದಿಲ್ಲ. ಪ್ರತಿ ಬಾರಿ ದೀಪಾವಳಿಗೆ ನಾಲ್ಕೈದು ದಿನ ಮುಂಚಿತವಾಗಿ ಸೇವಂತಿಗೆ ಹೂವನ್ನು ದಾಸ್ತಾನು ಮಾಡಿಕೊಳ್ಳುತ್ತೇವೆ.
ಒಂದು ವಾರದಿಂದಲೂ ಮಳೆಗೆ ಹಾಳಾಗಿರುವ ಹೂವು ಮಾರುಕಟ್ಟೆಗೆ ಬರುತ್ತಿದೆ. ಹೂವಿನ ಗುಣಮಟ್ಟ ಕಳಪೆ ಆದ ಕಾರಣ ದರ ಏರಿಲ್ಲ’ ಎಂದು ಹೂವಿನ ವ್ಯಾಪಾರಿ ಹನುಮಂತ ಬೇಸರ ವ್ಯಕ್ತಪಡಿಸಿದರು.

‘ದೀಪಾವಳಿಗೆ ಪೂಜೆಗೆ ಹೊರತುಪಡಿಸಿ ಹೂಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಹೂಗಳ ಬೆಲೆ ಕಡಿಮೆಯಾಗಿರುವುದು ಸಂತಸದ ಸುದ್ದಿ. ಹಬ್ಬದಲ್ಲಿ ಮನೆಯ ಅಂಗಳವನ್ನೆಲ್ಲಾ ದೀಪಗಳಿಂದ ಅಲಂಕರಿಸುತ್ತೇವೆ. ದೀಪಗಳೇ ದೀಪಾವಳಿಯ ಅಲಂಕಾರ. ಕಡಿಮೆ ಬೆಲೆಗೆ ಹೆಚ್ಚಾಗಿ ಹೂವು ಖರೀದಿ ಮಾಡಿದ್ದೇನೆ’ ಎಂದು ದೀಪಾಂಜಲಿನಗರ ನಿವಾಸಿ ಶೋಭಾ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.