ADVERTISEMENT

ದೇವನಹಳ್ಳಿ: ಚಿನ್ನ ಕಳ್ಳ ಸಾಗಣೆ– ‘ಮಾಣಿಕ್ಯ’ ನಟಿ ರನ್ಯಾ ರಾವ್‌ ಬಂಧನ!

ನಟಿಯಿಂದ 15 ಕೆ.ಜಿ ಚಿನ್ನ ವಶ * ಡಿಜಿಪಿ ಪುತ್ರಿ ಎಂದು ಪರಿಚಯಿಸಿಕೊಂಡ ನಟಿ* ‘ಮಾಣಿಕ್ಯ’ ಚಿತ್ರದ ನಾಯಕಿ ನಟಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 19:26 IST
Last Updated 4 ಮಾರ್ಚ್ 2025, 19:26 IST
ಚಿತ್ರ ನಟಿ ರನ್ಯಾ ರಾಂ
ಚಿತ್ರ ನಟಿ ರನ್ಯಾ ರಾಂ   

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ದುಬೈನಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ. 

ದುಬೈನಿಂದ ಸೋಮವಾರ ರಾತ್ರಿ ಎಮಿರೆಟ್ಸ್‌ ಏರ್‌ಲೈನ್ಸ್‌ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ತಪಾಸಣೆ ಮಾಡಿದಾಗ 14.80 ಕೆ.ಜಿ ಚಿನ್ನ ಪತ್ತೆಯಾಗಿದೆ.

ವಿಚಾರಣೆ ನಂತರ ನಟಿಯನ್ನು ಬಂಧಿಸಿದ ಡಿಆರ್‌ಐ ಅಧಿಕಾರಿಗಳು ಆಕೆಯನ್ನು ಬೆಂಗಳೂರಿನ ಎಚ್‌ಬಿಆರ್‌ ಲೇಔಟ್‌ನಲ್ಲಿರುವ ಡಿಆರ್‌ಐ ಕಚೇರಿಗೆ ಕರೆದೊಯ್ದರು.

ADVERTISEMENT

ಸುದೀಪ್‌ ನಟಿಸಿರುವ ‘ಮಾಣಿಕ್ಯ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ರನ್ಯಾ ರಾವ್‌, ತಾನು ಡಿಐಜಿ ಡಾ.ಕೆ.ರಾಮಚಂದ್ರರಾವ್‌ ಅವರ ಮಲಮಗಳು ಎಂದು ಪ್ರಾಥಮಿಕ ತನಿಖೆ ವೇಳೆ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದುಬೈನ ಚಿನ್ನ ಕಳ್ಳಸಾಗಣೆ ಜಾಲದಲ್ಲಿ ಕನ್ನಡದ ನಟಿಯೊಬ್ಬರು ಸಕ್ರಿಯರಾಗಿರುವ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಕೆಲವು ದಿನಗಳ ಹಿಂದೆ ಮಾಹಿತಿ ದೊರೆತ್ತಿತ್ತು. ಪದೇ ಪದೇ ದುಬೈಗೆ ಹೋಗಿ ಬರುತ್ತಿದ್ದ ರನ್ಯಾ ಓಡಾಟದ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದರು.

ಕಳೆದ 15 ದಿನಗಳಲ್ಲಿ ರನ್ಯಾ ರಾವ್‌ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿದ್ದರು. ಅಧಿಕಾರಿಗಳು ಸೋಮವಾರ ರಾತ್ರಿ ಆಕೆಗಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆಕೆ ಬಂದಿಳಿಯುತ್ತಲೇ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಅವರ ಶಂಕೆ ನಿಜವಾಯಿತು. ವಿಮಾನ ನಿಲ್ದಾಣದಲ್ಲಿಯೇ ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ನಟಿಯನ್ನು ಬಂಧಿಸಿ ಡಿಆರ್‌ಐ ಕಚೇರಿಗೆ ಕರೆದೊಯ್ದರು.

ಕೋರಮಂಗಲದಲ್ಲಿರುವ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಆರೋಪಿಯನ್ನು ಮಂಗಳವಾರ ರಾತ್ರಿ ಹಾಜರು ಪಡಿಸಲಾಯಿತು.

ಡಿಆರ್‌ಐ ಅಧಿಕಾರಿಗಳು ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಕೋರದ ಕಾರಣ ನ್ಯಾಯಾಧೀಶರು ಮಾರ್ಚ್‌ 18ರ ವರೆಗೆ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಚಿಕ್ಕಮಗಳೂರಿನ ರನ್ಯಾ 2014ರಲ್ಲಿ ‘ಮಾಣಿಕ್ಯ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ನಟ ಗಣೇಶ್ ಎದುರು ನಾಯಕಿಯಾಗಿ ‘ಪಟಾಕಿ’ ಸಿನಿಮಾ ಹಾಗೂ ತಮಿಳು ಸಿನಿಮಾವೊಂದರಲ್ಲಿ ಆಕೆ ನಟಿಸಿದ್ದಾರೆ. ಆದರೆ, ವೃತ್ತಿ ಬದುಕಿನಲ್ಲಿ ಅಷ್ಟೇನೂ ಯಶಸ್ಸು ಗಳಿಸಿರಲಿಲ್ಲ ಎಂದು ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.