ADVERTISEMENT

ನೇರ ಮಾರುಕಟ್ಟೆ | ರೈತರಿಗೆ ₹ 1.2 ಕೋಟಿಗೂ ಹೆಚ್ಚು ವರಮಾನ: ಅಶ್ವತ್ಥನಾರಾಯಣ

ನಾಗಪುರದ ಮಹಾ ಕೃಷಿ ಮೇಳ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 20:11 IST
Last Updated 24 ಡಿಸೆಂಬರ್ 2021, 20:11 IST
ಸಿ.ಎನ್‌.ಅಶ್ವತ್ಥನಾರಾಯಣ
ಸಿ.ಎನ್‌.ಅಶ್ವತ್ಥನಾರಾಯಣ   

ಬೆಂಗಳೂರು: 'ಕರ್ನಾಟಕದಲ್ಲಿ ಕೃಷಿಕಲ್ಪದಂತಹ ಸಾಮಾಜಿಕ ಉದ್ಯಮಗಳ ಮೂಲಕ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಡಿ ಕೃಷಿ ಉತ್ಪನ್ನಗಳಿಗೆ ₹ 7 ಕೋಟಿ ಮೌಲ್ಯದ ಮಾರುಕಟ್ಟೆ ಒದಗಿಸಲಾಗಿದೆ. ರೈತರಿಗೆ ₹ 1.2 ಕೋಟಿಗೂ ಅಧಿಕ ವರಮಾನ ದೊರೆತಿದೆ. ಕೃಷಿ ಉತ್ಪಾದಕ ಸಂಸ್ಥೆಗಳಿಗೆ ₹ 80 ಲಕ್ಷಕ್ಕೂ ಹೆಚ್ಚಿನ ಲಾಭವಾಗಿದೆ’ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ನಾಗಪುರದಲ್ಲಿ ಕೃಷಿಮೇಳ ‘ಅಗ್ರೋವಿಷನ್’ನ ಉದ್ಘಾಟನಾ ಸಮಾರಂಭದಲ್ಲಿ ಅವರು ‘ತಂತ್ರಜ್ಞಾನದಿಂದ ಕೃಷಿಯ ಪರಿವರ್ತನೆ- ಆವಿಷ್ಕಾರ ಮತ್ತು ನವೋದ್ಯಮಗಳು’ ಕುರಿತು ಶುಕ್ರವಾರ ಮಾತನಾಡಿದರು.

'ಕರ್ನಾಟಕದಲ್ಲಿ ನವೋದ್ಯಮಗಳಿಗೆ ಮತ್ತು ತಾಂತ್ರಿಕ ಉದ್ಯಮಶೀಲರಿಗೆ ಕೃಷಿ ಹಾಗೂ ಕೃಷಿಪೂರಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಲಾಗಿದೆ. ಕೃಷಿ, ಆಹಾರ ತಾಂತ್ರಿಕ ಕಂಪನಿಗಳು ಹಾಗೂ ಕೃಷಿ ಉತ್ಪಾದಕ ಸಂಸ್ಥೆಗಳ ನಡುವೆ ನೇರ ಮಾರುಕಟ್ಟೆ ಕಲ್ಪಿಸಲು ಒತ್ತು ಕೊಡಲಾಗಿದೆ’ ಎಂದರು.

ADVERTISEMENT

‘ರೈತರನ್ನು ಗಮನದಲ್ಲಿರಿಸಿಕೊಂಡು ಕೃಷಿ ಪೂರೈಕೆ ಸರಪಳಿಗೆ ಹೊಸ ರೂಪ ಕೊಡಬೇಕಿದೆ. ಪ್ರತಿಯೊಬ್ಬ ಕೃಷಿಕನನ್ನೂ ಸಣ್ಣ ಉದ್ಯಮಿಯನ್ನಾಗಿಸಬೇಕು. ಮುಂದಿನ ತಲೆಮಾರಿನ ರೈತರು ಹೆಚ್ಚಿನ ತಾಂತ್ರಿಕ ಜ್ಞಾನ ಹೊಂದಿರುತ್ತಾರೆ. ಬ್ರಾಡ್ ಬ್ಯಾಂಡ್ ಸೇರಿದಂತೆ ಆಧುನಿಕ ತಂತ್ರಜ್ಞಾನಗಳು ಕುಗ್ರಾಮವನ್ನೂ ತಲುಪಲಿವೆ. ಇಂತಹ ಸನ್ನಿವೇಶದಲ್ಲಿ ನಾವು ಈ ತಾಂತ್ರಿಕ ಬೆಳವಣಿಗೆಯನ್ನು ಕೃಷಿ ಇಳುವರಿ ಹೆಚ್ಚಿಸಲು, ಉತ್ಪಾದಕತೆ ಅಧಿಕವಾಗಿಸಲು, ಮಾರುಕಟ್ಟೆ ಸಂಪರ್ಕಗಳನ್ನು ಕಲ್ಪಿಸಲು ಬಳಸಿಕೊಳ್ಳುವ ಬಗ್ಗೆ ಆಲೋಚಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ದೇಶದಲ್ಲಿ ಶೇ 55ರಷ್ಟು ಜನ ಕೃಷಿ ಅವಲಂಬಿತರಿದ್ದರೂ ಜಾಗತಿಕ ಕೃಷಿ ವಹಿವಾಟಿಗೆ ನಮ್ಮ ಕೊಡುಗೆ ಶೇ 2.15ಕ್ಕಿಂತ ಕಡಿಮೆ. ಒಟ್ಟು ಆಂತರಿಕ ಉತ್ಪನ್ನಕ್ಕೆ ಕೃಷಿಯ ಕೊಡುಗೆ ಶೇ 15ಕ್ಕಿಂತ ಕಡಿಮೆ ಇದೆ. ಈ ಪರಿಸ್ಥಿತಿ ಬದಲಾಗಿ, ಭಾರತವು ಹೈ-ಟೆಕ್ ನೆಲೆಯಾಗುವ ಜೊತೆಗೆ ಕೃಷಿ ತಾಂತ್ರಿಕತೆಯ ಪ್ರಶಸ್ತ ತಾಣವೂ ಆಗಬೇಕು’ ಎಂದರು.

‘ಬೆಳೆಗೆ ಏನೇನು ಹಾಕಬೇಕೆಂಬ ಸೂಚನೆಯನ್ನು ತಂತ್ರಜ್ಞಾನವೇ ಒದಗಿಸುತ್ತದೆ. ಐಒಟಿ ತಾಂತ್ರಿಕತೆಯಿಂದ ಹವಾಮಾನ ವರದಿಯನ್ನು ಬಹುತೇಕ ನಿಖರವಾಗಿ ಕೊಡಬಹುದು. 30 ನಿಮಿಷದಲ್ಲಿ ಮಣ್ಣು ಪರೀಕ್ಷೆಯ ಫಲಿತಾಂಶ ಲಭಿಸುತ್ತದೆ. ಕೃತಕ ಬುದ್ಧಿಮತ್ತೆ ಮತ್ತು ಮಷೀನ್ ಲರ್ನಿಂಗ್ ಬಳಸಿ ಕೊಯ್ಲಿಗೆ ಬಂದ ಬೆಳೆ ಪ್ರಮಾಣ, ಪ್ರಕೃತಿ ವಿಕೋಪಗಳಿಂದಾದ ಬೆಳೆ ಹಾನಿಯನ್ನು ಲೆಕ್ಕಹಾಕಬಹುದು’ ಎಂದು ವಿವರಿಸಿದರು.

‘ದೇಶದಲ್ಲಿ ಕೃಷಿ ತಾಂತ್ರಿಕತೆಯ ನವೋದ್ಯಮಗಳು ಹೆಚ್ಚಾಗುತ್ತಿವೆ. ಕಳೆದ 11 ತಿಂಗಳಲ್ಲಿ ಈ ಕ್ಷೇತ್ರದಲ್ಲಿ ₹5 ಸಾವಿರ ಕೋಟಿ ಹೂಡಿಕೆಯಾಗಿದೆ. ಈಗ ದೇಶದಾದ್ಯಂತ 70ಕ್ಕೂ ಹೆಚ್ಚು ನವೋದ್ಯಮಗಳು ಕೃಷಿ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಒದಗಿಸುತ್ತಿವೆ. ಸುಮಾರು ₹ 8 ಸಾವಿರ ಕೋಟಿ ವಹಿವಾಟಿಗೆ ಅನುವು ಮಾಡಿಕೊಟ್ಟಿವೆ. ರೈತರ ಆದಾಯವು ಎರಡು ಪಟ್ಟು ಹೆಚ್ಚಾಗಿದೆ. ಪ್ರತಿಯೊಂದು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ ರೈತರ ವರಮಾನವನ್ನು ಶೇ 20ರಷ್ಟು ಹೆಚ್ಚಿಸಬಹುದು ಎಂದರು.

‘ಪ್ರತಿಯೊಂದು ನವೋದ್ಯಮವೂ ಜಿಲ್ಲೆಯಲ್ಲಿ 5ರಿಂದ 10 ಹಳ್ಳಿಗಳನ್ನು ದತ್ತು ಪಡೆದು ಕೃಷಿ ತಂತ್ರಜ್ಞಾನ ಬಳಕೆಯ ಅರಿವು ಮೂಡಿಸಬೇಕು. 2017– 20ರ ಅವಧಿಯಲ್ಲಿ ದೇಶಕ್ಕೆ ಕೃಷಿ ತಾಂತ್ರಿಕತೆ ₹ 7503 ಕೋಟಿ ಅನುದಾನ ಬಂದಿದೆ. 2022-25ರ ಅವಧಿಯಲ್ಲಿ ಇದು ಮೂರು ಪಟ್ಟು ಹೆಚ್ಚಾಗುವ ಅಂದಾಜಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.