ADVERTISEMENT

ಏಪ್ರಿಲ್ ಮೊದಲ ವಾರ ಡಿಕೆಶಿ ಅಧಿಕಾರ ಸ್ವೀಕಾರ

ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನದಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 19:45 IST
Last Updated 14 ಮಾರ್ಚ್ 2020, 19:45 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷರಾಗಿ ನೇಮಕವಾಗಿರುವ ಡಿ.ಕೆ. ಶಿವಕುಮಾರ್ ಅವರು ಏಪ್ರಿಲ್ ಮೊದಲ ವಾರ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ಅಧ್ಯಕ್ಷರಾಗಿ ನೇಮಕಗೊಳ್ಳುತ್ತಿದ್ದಂತೆ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ಮಾಡಿರುವ ಶಿವಕುಮಾರ್‌, ಬಲ ಒಗ್ಗೂಡಿಸುವ ಕೆಲಸ ಮಾಡಲು ಮುಂದಾಗಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖಂಡ ರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌. ಮುನಿಯಪ್ಪ, ನಿರ್ಗಮಿತ ಅಧ್ಯಕ್ಷ ದಿನೇಶ್‌ ಗುಂಡೂರಾವ್ ನಿವಾಸಗಳಿಗೆ ಭೇಟಿ ಕೊಟ್ಟ ಶಿವಕುಮಾರ್‌, ಪಕ್ಷದ ಸಂಘಟನೆಗೆ ನೆರವು ನೀಡುವಂತೆ ಕೋರಿದರು. ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕಾದರೆ ಏನು ಮಾಡಬೇಕು ಎಂಬ ಬಗ್ಗೆ ಸಲಹೆಯನ್ನೂ ಪಡೆದರು.

ADVERTISEMENT

ಅಧಿವೇಶನ ಮುಗಿಯುವ ಮುನ್ನವೇ ಎಲ್ಲ ಹಿರಿಯ ನಾಯಕರನ್ನು ದೆಹಲಿಗೆ ಕರೆದೊಯ್ದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡುವ ಆಲೋಚನೆ ಶಿವಕುಮಾರ್ ಅವರದ್ದಾಗಿದೆ. ‘ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಲು ತಯಾರಿದ್ದೇನೆ’ ಎಂದು ಬಿಂಬಿಸಿಕೊಳ್ಳುವುದು ಈ ಭೇಟಿಯ ಹಿಂದಿನ ಉದ್ದೇಶ ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ, ಅಧಿಕಾರ ಸ್ವೀಕರಿಸುವ ಸಮಾರಂಭವನ್ನು ಕಾಂಗ್ರೆಸ್ ಶಕ್ತಿ ಪ್ರದರ್ಶನದ ಕಾರ್ಯಕ್ರಮವಾಗಿ ರೂಪಿಸಿವುದು, ಪಕ್ಷಕ್ಕೆ ಮರು ಚೈತನ್ಯ ತರುವ ಕೆಲಸ ಮಾಡುವುದು ಅವರ ಉದ್ದೇಶ. ಈ ಕಾರ್ಯಕ್ರಮಕ್ಕೆ ಸೋನಿಯಾಗಾಂಧಿ ಅವರನ್ನು ಕರೆತರಲು ಸಾಧ್ಯವಾಗದೇ ಇದ್ದರೆ, ಪ್ರಿಯಾಂಕಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರನ್ನು ಕರೆತರುವ ಯತ್ನ ವನ್ನು ಶಿವಕುಮಾರ್ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.