ADVERTISEMENT

ಬಿಡುವಿಲ್ಲದ ಕಾಯಕ: ಮನದ ದುಗುಡ ಮರೆಯಲು ವೈದ್ಯರ ಪಡಿಪಾಟಲು

ಕೋವಿಡ್‌ ಯೋಧರನ್ನು ಕಾಡುತ್ತಿದೆ ಕಳವಳ * ವೈದ್ಯಕೀಯ ಸಿಬ್ಬಂದಿಗೆ ಮಾನಸಿಕ ಒತ್ತಡ

ಪ್ರವೀಣ ಕುಮಾರ್ ಪಿ.ವಿ.
Published 15 ಅಕ್ಟೋಬರ್ 2020, 21:00 IST
Last Updated 15 ಅಕ್ಟೋಬರ್ 2020, 21:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ. ನನಗೆ ಕೆಲಸ ಮಾಡುವುದಕ್ಕೇ ಆಗುತ್ತಿಲ್ಲ. ಏನು ಮಾಡಬೇಕೆಂದೇ ತೋಚುತ್ತಿಲ್ಲ. ಮನಸ್ಸು ಹಗುರ ಮಾಡಿಕೊಳ್ಳಲು ನನಗೆ ಒಂದು ತಿಂಗಳಾದರೂ ಬೇಕು. ಕೆಲಸಕ್ಕೆ ಮರಳುವ ಬಗ್ಗೆಆ ಬಳಿಕ ಯೋಚಿಸುತ್ತೇನೆ. ಮತ್ತೆ ವೈದ್ಯ ವೃತ್ತಿ ಮುಂದುವರಿಸುತ್ತೇನೋ ಇಲ್ಲವೋ ತಿಳಿಯದು’

ನಗರದ ಹೊರ ವಲಯದ ಆಸ್ಪತ್ರೆಯೊಂದರ ಯುವವೈದ್ಯರೊಬ್ಬರು ಕೆಲಸ ತೊರೆಯುತ್ತಿರುವ ವಿಚಾರವನ್ನು ಆಸ್ಪತ್ರೆಯ ಮುಖ್ಯ ವೈದ್ಯರಿಗೆ ತಿಳಿಸಿದ ಪರಿ ಇದು. ಆ ಯುವ ವೈದ್ಯರನ್ನು ತಡೆಯುವ ಸ್ಥಿತಿಯಲ್ಲಿ ಮುಖ್ಯ ವೈದ್ಯರೂ ಇರಲಿಲ್ಲ. ಏಕೆಂದರೆ, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಕರ್ತವ್ಯ ನಿರ್ವಹಿಸಿದ್ದಆ ವೈದ್ಯರು ಇತ್ತೀಚಿನ ದಿನಗಳಲ್ಲಿಎಷ್ಟು ಒತ್ತಡ ಎದುರಿಸಿದ್ದಾರೆ ಎಂಬುದು ಮುಖ್ಯ ವೈದ್ಯರಿಗೂ ಚೆನ್ನಾಗಿ ತಿಳಿದಿತ್ತು. ಈ ಪ್ರಸಂಗವನ್ನು ಮುಖ್ಯವೈದ್ಯರೇ ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು. ‘ನಮ್ಮಲ್ಲೇ ಇಬ್ಬರು ವೈದ್ಯರು ಸೇರಿ 14 ಮಂದಿ ಕೆಲಸ ಬಿಟ್ಟಿದ್ದರಿಂದ ಐಸಿಯುವನ್ನು ಎರಡು ವಾರ ಮುಚ್ಚಬೇಕಾಯಿತು’ ಎಂದು ಅವರು ವಸ್ತುಸ್ಥಿತಿ ಬಿಚ್ಚಿಟ್ಟರು.

ವೈದ್ಯ ವೃತ್ತಿ ಹೆಚ್ಚು ಒತ್ತಡದಿಂದ ಕೂಡಿರುವಂತಹದ್ದು. ಕೋವಿಡ್‌ ಬಳಿಕ ಈ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಆರೇಳು ತಿಂಗಳುಗಳಿಂದ ಕೋವಿಡ್ ರೋಗಿಗಳ ಆರೈಕೆಯಲ್ಲಿ ತೊಡಗಿರುವ ಅನೇಕ ವೈದ್ಯಕೀಯ ಸಿಬ್ಬಂದಿ ಬಿಡುವಿಲ್ಲದ ಕೆಲಸದಿಂದ ಮಾನಸಿಕವಾಗಿ ಜರ್ಝರಿತರಾಗುತ್ತಿದ್ದಾರೆ.

ADVERTISEMENT

‘ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವವರು ದಿನವಿಡೀ ಪಿಪಿಇ ಕಿಟ್‌ ಧರಿಸಿರಬೇಕು. ಇದು ತುಂಬಾ ಕಿರಿಕಿರಿದಾಯಕ. ರೋಗಿಗಳನ್ನು ಮುಟ್ಟಿ ಅವರ ದೇಹಸ್ಥಿತಿ ತಿಳಿದುಕೊಳ್ಳಲು ಈಗ ಸಾಧ್ಯವಾಗುತ್ತಿಲ್ಲ. ಕೋವಿಡ್‌ ವಾರ್ಡ್‌ ಕೆಲಸ ಮಾಡುವ ವೈದ್ಯರಿಗೂ ಈ ರೋಗದ ಭಯ ಇರುತ್ತದೆ. ಇನ್ನೊಂದೆಡೆ ಮನೆಯವರ ಸಂಪರ್ಕ ಇರುವುದಿಲ್ಲ. ಆರು ತಿಂಗಳಿಂದ ಕೋವಿಡ್‌ ಪರಿಸ್ಥಿತಿ ಉಲ್ಬಣಿಸುತ್ತಲೇ. ಇದು ಎಲ್ಲಿ ತಲುಪುತ್ತದೆ ಅನಿಶ್ಚಿತತೆ ಇದೆ. ಇವೆಲ್ಲವೂ ವೈದ್ಯರ ಮೇಲಿನ ಒತ್ತಡವನ್ನು ಹೆಚ್ಚಿಸುತ್ತವೆ’ ಎನ್ನುತ್ತಾರೆ ಮನೋರೋಗ ತಜ್ಞ ಡಾ.ಭಾರ್ಗವರಾಮನ್‌.

ವೈದ್ಯರ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ಒತ್ತಡ ಕಡಿಮೆ ಮಾಡಲುಹೊರಗಡೆ ಸುತ್ತಾಡುವಂತಿಲ್ಲ. ವ್ಯಾಯಾಮ ಇಲ್ಲ. ಹಾಗಾಗಿ ಒತ್ತಡದಿಂದ ಹೊರಬರುವ ದಾರಿಗಳೂ ಮುಚ್ಚಿವೆ.

‘ವೈದ್ಯಕೀಯ ಸಿಬ್ಬಂದಿಯೂ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಅನ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ನಮಗೂ ಗೊತ್ತು. ವೈದ್ಯರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸೋಣವೆಂದರೆ ಅವರ ಸ್ಥಾನಕ್ಕೆ ಪರ್ಯಾಯ ವೈದ್ಯರು ಸಿಗುತ್ತಿಲ್ಲ. ಹೇಗೋ ಪರಿಸ್ಥಿತಿ ನಿಭಾಯಿಸಿಕೊಂಡು ಹೋಗುತ್ತಿದ್ದೇವೆ’ ಎನ್ನುತ್ತಾರೆ ಜಿಗಣಿಯ ಏಸ್‌ ಸುಹಾಸ್‌ ಆಸ್ಪತ್ರೆಯ ಡಾ.ಜಗದೀಶ ಹಿರೇಮಠ್‌.

ವೈದ್ಯಕೀಯ ಸಿಬ್ಬಂದಿಗೆ ಪಿಕ್‌ನಿಕ್‌’

ವೈದ್ಯಕೀಯ ಸಿಬ್ಬಂದಿಯ ಒತ್ತಡ ಕಡಿಮೆ ಮಾಡಲು ಕೆಲವು ಆಸ್ಪತ್ರೆಗಳು ನಾನಾ ತಂತ್ರಗಳ ಮೊರೆ ಹೋಗುತ್ತಿವೆ.

‘ಕೆಲವು ಆಸ್ಪತ್ರೆಗಳು ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸೈಕ್ಲಿಂಗ್‌, ಕ್ರೀಡಾ ಚಟುವಟಿಕೆ ಹಾಗೂ ಇತರ ಗುಂಪು ಮನರಂಜನಾ ಚಟುವಟಿಕೆ ಹಮ್ಮಿಕೊಳ್ಳುತ್ತಿವೆ. ನಮ್ಮ ಆಸ್ಪತ್ರೆಯ ಸಿಬ್ಬಂದಿಗೆ ಇತ್ತೀಚೆಗೆ ಕಿರು ಪ್ರವಾಸ ಏರ್ಪಡಿಸಿದ್ದೆವು. ಬೆರಳೆಣಿಕಯಷ್ಟು ವೈದ್ಯರು ಪ್ರೇಕ್ಷಣೀಯ ಸ್ಥಳಗಳಿಗೆ ಪಿಕ್‌ನಿಕ್ ಹೋಗಿಬಂದರು. ಅವರ ಮಾನಸಿಕ ಆರೋಗ್ಯ ಕಾಪಾಡಲು ಇದು ಅತ್ಯಗತ್ಯ’ ಎಂದು ರೀಗಲ್‌ ಆಸ್ಪತ್ರೆಯ ತಜ್ಞವೈದ್ಯ ಹಾಗೂ ಆಡಳಿತ ನಿರ್ದೇಶಕ ಡಾ. ವಿ.ಸೂರಿರಾಜು ತಿಳಿಸಿದರು.

‘ಸಮಸ್ಯೆ ಅರಿವು ಇರುವುದರಿಂದ ಕಳವಳ ಜಾಸ್ತಿ’

‘ಕೋವಿಡ್‌ ಉಲ್ಬಣಗೊಂಡಾಗ ರೋಗಿಗಳ ಸ್ಥಿತಿ ಹೇಗಿರುತ್ತದೆ ಎಂದು ಚಿಕಿತ್ಸೆ ನೀಡುವ ವೈದ್ಯರಿಗೆ ಚೆನ್ನಾಗಿ ಗೊತ್ತಿರುತ್ತದೆ. ಸಕಾಲದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಅಥವಾ ವೆಂಟಿಲೇಟರ್‌ ಸಿಗದೇ ರೋಗಿಗಳು ಸತ್ತ ಉದಾಹರಣೆಗಳು ಹೆಚ್ಚುತ್ತಿವೆ. ವೈದ್ಯರು ಕೋವಿಡ್‌ ವೈರಾಣುಗಳಿಗೆ ಒಡ್ಡಿಕೊಳ್ಳುವ ಪ್ರಮಾಣವೂ ಜಾಸ್ತಿ. ನಾಳೆ ತಮಗೂ ಈ ಪರಿಸ್ಥಿತಿ ಬರಬಹುದು ಎಂಬ ಕಳವಳ ಸಹಜವಾಗಿಯೇ ವೈದ್ಯರನ್ನು ಕಾಡುತ್ತದೆ’ ಎನ್ನುತ್ತಾರೆ ಜೆ.ಪಿ.ನಗರದ ಜಿವಿಜಿ ಎನ್‌ವಿವೊ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಆಡಳಿತ ನಿರ್ದೇಶಕಾರಗಿರುವ ಡಾ. ಗುಣಶೇಖರ್‌.

ಪ್ಲಾಸ್ಟಿಕ್‌ ಸರ್ಜರಿ ಹಾಗೂ ಸೌಂದರ್ಯ ಚಿಕಿತ್ಸೆ ನೀಡುತ್ತಿದ್ದ ತಮ್ಮ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ ಈ ರೋಗದ ನಿಯಂತ್ರಣಕ್ಕೆ ಸರ್ಕಾರದ ಜೊತೆ ಕೈಜೋಡಿಸಿದ್ದಾರೆ.

‘ನಿತ್ಯವೂ ನೋಡುವ ಸಾವು– ಹುಟ್ಟಿಸುತ್ತಿದೆ ಭೀತಿ’

‘ಐಸಿಯುಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ನಿತ್ಯವೂ ಕೋವಿಡ್‌ನಿಂದ ರೋಗಿಗಳ ಸಾವನ್ನು ಹತ್ತಿರದಿಂದ ನೋಡುತ್ತಿರುತ್ತಾರೆ. ನಿತ್ಯವೂ ಒಂದಲ್ಲ ಒಂದು ಸಾವನ್ನು ನೋಡುವಾಗ ಅವರನ್ನು ಬದುಕಿಸಲು ಆಗುತ್ತಿಲ್ಲವಲ್ಲ ಎಂಬ ಚಡಪಡಿಕೆ ಅವರಲ್ಲೂ ಇರುತ್ತದೆ. ಮುಂದಿನ ಸರದಿ ಯಾರದ್ದು ಎಂದು ಎದುರುನೋಡುವ ಕಠೋರ ಸ್ಥಿತಿ ಅವರದು. ಎಷ್ಟೋ ವೈದ್ಯರು ಕುಟುಂಬದವರಿಂದ ದೂರವೇ ಉಳಿದಿದ್ದಾರೆ. ಇಂತಹ ಪರಿಸ್ಥಿತಿ ಸಹಜವಾಗಿಯೇ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತದೆ’ ಎಂದು ವಿಶ್ಲೇಷಿಸುತ್ತಾರೆ ಮನೋರೋಗ ತಜ್ಞ ಡಾ.ಭಾರ್ಗವರಾಮನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.