ADVERTISEMENT

ಕಬ್ಬನ್‌ ಪಾರ್ಕ್‌ನಲ್ಲಿ ನಾಯಿ ಹಾವಳಿ: ಹೈಕೋರ್ಟ್‌ ಕಳವಳ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 16:18 IST
Last Updated 9 ಡಿಸೆಂಬರ್ 2021, 16:18 IST
ಕಬ್ಬನ್ ಪಾರ್ಕ್‌
ಕಬ್ಬನ್ ಪಾರ್ಕ್‌   

ಬೆಂಗಳೂರು: ‘ನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆತಂದು ಮಲ, ಮೂತ್ರ ವಿಸರ್ಜನೆ ಮಾಡಿಸುವುದನ್ನು ತಡೆಯಬೇಕು. ಈ ವಿಷಯದಲ್ಲಿ ಬಿಬಿಎಂಪಿ ತಾನಾಗಿಯೇ ಕ್ರಮ ಜರುಗಿಸಬೇಕು. ಇಲ್ಲವಾದರೆ ನ್ಯಾಯಾಲಯವೇ ಈ ಸಂಗತಿಯನ್ನು ಪರಿಗಣನೆಗೆ ತೆಗೆದುಕೊಂಡು ನೋಟಿಸ್ ಜಾರಿ ಮಾಡಲು ಆದೇಶಿಸಬೇಕಾಗುತ್ತದೆ’ ಎಂದು ಹೈಕೋರ್ಟ್‌ ಮೌಖಿಕ ಎಚ್ಚರಿಕೆ ನೀಡಿದೆ.

‘ಕಬ್ಬನ್ ಪಾರ್ಕ್‌ಗೆ ಸೇರಿದ ಜಾಗವನ್ನು ವಿವಿಧ ಸಂಸ್ಥೆಗಳು ಅತಿಕ್ರಮಿಸಿ ಕಟ್ಟಡ ನಿರ್ಮಿಸಿವೆ’ ಎಂದು ಆರೋಪಿಸಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು, ‘ಬೆಳಗಿನ ಸಮಯದಲ್ಲಿ ನಾಯಿಗಳನ್ನು ಕಬ್ಬನ್‌ ಪಾರ್ಕ್ ಒಳಗೆ ಬಿಡುವುದಕ್ಕೆ ಯಾವುದೇ ನಿರ್ಬಂಧ ಇಲ್ಲವೇ, ಇದಕ್ಕೆ ಯಾವುದೇ ಶುಲ್ಕ ನಿಗದಿಪಡಿಸಿಲ್ಲವೇ, ಸಾರ್ವಜನಿಕ ಪ್ರದೇಶದಲ್ಲಿ ನಾಯಿಗಳ ಪ್ರವೇಶಕ್ಕೆ ಹೇಗೆ ಅನುಮತಿ ನೀಡಲಾಗಿದೆ. ಬೀದಿ ಮತ್ತು ಸಾಕು ನಾಯಿಗಳ ನಿರ್ವಹಣೆಗೆ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಪ್ರಶ್ನಿಸಿದರು.

ADVERTISEMENT

‘ಮಾಲೀಕರು ತಮ್ಮ ಸಾಕು ನಾಯಿಗಳನ್ನು ಪಾರ್ಕ್ ಒಳಗೆ ಕರೆತಂದು ಸ್ವತಂತ್ರವಾಗಿ ಅಲೆಯಲು ಬಿಟ್ಟಿರುತ್ತಾರೆ. ಅವುಗಳಿಗೆ ಸರಪಳಿ ಕೂಡಾ ಹಾಕಿರುವುದಿಲ್ಲ. ಇನ್ನೂ ಕೆಲವರು ವಾಹನಗಳಲ್ಲಿ ಆಹಾರ ತಂದು ಬೀದಿ ನಾಯಿಗಳಿಗೆ ಹಾಕುತ್ತಾರೆ. ಅವುಗಳ ಮುಂದೆ ಜನರು ಹೋದರೆ ಅವು ವ್ಯಗ್ರವಾಗಿ ವರ್ತಿಸುತ್ತವೆ. ಕೆಲವೊಮ್ಮೆ ಬೆನ್ನಟ್ಟುತ್ತವೆ. ಬೆಳಗ್ಗೆ ವಾಯುವಿಹಾರಕ್ಕೆ ಬರುವವರೆಗೆ ಇದು ನಿಜಕ್ಕೂ ಅಪಾಯಕಾರಿ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜಾನುವಾರುಗಳನ್ನೂ ರಸ್ತೆಗಳ ಮೇಲೆ ಬಿಡಲಾಗುತ್ತಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಉದ್ಯಾನದ ಒಳಗೆ ಮತ್ತು ರಸ್ತೆಗಳ ಮೇಲೆ ನಾಯಿ ಹಾಗೂ ಜಾನುವಾರುಗಳನ್ನು ಬೇಕಾಬಿಟ್ಟಿ ಅಲೆಯಲು ಬಿಡುವುದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಮೂರ್ತಿಗಳು ಬಿಬಿಎಂಪಿಗೆ ಮೌಖಿಕ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.