ಕೆ.ಆರ್.ಪುರ: ದಿನ ಬಳಕೆಯ ನೀರು ಪೂರೈಸಲು ನಿರ್ಲಕ್ಷ್ಯ ವಹಿಸುತ್ತಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದಿನ್ನೂರು ಗ್ರಾಮದ ಮಹಿಳೆಯರು ನಿವಾಸಿಗಳು ಖಾಲಿ ಕೊಡ ಹಿಡಿದು ಪ್ರತಿಭಟಿಸಿದರು.
ಕಾಡುಗೋಡಿಯಿಂದ ವೈಟ್‌ಫೀಲ್ಡ್‌ನ ಐಟಿಪಿಎಲ್ ಸಂಪರ್ಕಿಸುವ ಮುಖ್ಯರಸ್ತೆಯನ್ನು ತಡೆದು ಪ್ರತಿಭಟಿಸಿದರು.
‘ದಿನ್ನೂರು ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ದಿನ ಬಳಕೆ ನೀರಿಗಾಗಿ ಪರಿತಪಿಸುವಂತಾಗಿದೆ. ಆದರೆ ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಮನವಿ ಮಾಡಿದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಅಧಿಕಾರಿಗಳು ಬರುವವರೆಗೂ ರಸ್ತೆ ತೆರವು ಮಾಡುವುದಿಲ್ಲ’ ಎಂದು ಕೆಲಕಾಲ ರಸ್ತೆ ಬಂದ್ ಮಾಡಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಕಾಡುಗೋಡಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ರಸ್ತೆ ತೆರವು ಮಾಡಿದರು.
‘ದಿನ್ನೂರು ಗ್ರಾಮದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರಿದ್ದು, ಹೆಚ್ಚಾಗಿ ದಿನಗೂಲಿ ಕಾರ್ಮಿಕರಾಗಿದ್ದಾರೆ. ಕೆಲದಿನಗಳಿಂದ ದಿನ ಬಳಕೆ ಹಾಗೂ ಕುಡಿಯುವ ನೀರಿಗಾಗಿ ಸಮಸ್ಯೆ ಎದುರಾಗಿದೆ. ಗ್ರಾಮದಲ್ಲಿ ಮೂರು ಕೊಳವೆಬಾವಿಗಳಿದ್ದರೂ ಕೆಟ್ಟು ನಿಂತಿವೆ. ಬಿಬಿಎಂಪಿ ಅಧಿಕಾರಿಗಳು ದುರಸ್ತಿ ಮಾಡಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮದ ನಿವಾಸಿ ಮುನೇಂದ್ರ.ಪಿ. ಆಕ್ರೋಶ ವ್ಯಕ್ತಪಡಿಸಿದರು.
‘ಹಲವು ದಿನಗಳಿಂದ ನೀರಿನ ಸಮಸ್ಯೆ ಬಿಗಾಡಿಯಿಸಿದೆ. ಕೆಲವೊಮ್ಮೆ ಬಿಬಿಎಂಪಿ ಅಧಿಕಾರಿಗಳು ಟ್ಯಾಂಕರ್ ನೀರನ್ನು ಗ್ರಾಮಕ್ಕೆ ಕಳುಹಿಸುತ್ತಾರೆ. ನೀರು ಶೇಖರಿಸಿ ಇಟ್ಟುಕೊಳ್ಳಲು ಪ್ರತಿ ಮನೆಗೆ ಎರಡು ಡ್ರಮ್ ಮಾತ್ರ ನೀರು ಬಿಡುತ್ತಾರೆ. ಇದು ನಮಗೆ ಸಾಕಾಗುವುದಿಲ್ಲ. ಡ್ರಮ್ ಇಲ್ಲದ ಮನೆಗಳಿಗೆ ನೀರು ಬಿಡುವುದಿಲ್ಲ. ದುಬಾರಿ ಹಣ ನೀಡಿ ಡ್ರಮ್ ಖರೀದಿಸುವುದು ಹೇಗೆ’ ಎಂದು ಗ್ರಾಮದ ಮಹಿಳೆ ಮುನಿಲಕ್ಷ್ಮಮ್ಮ ಪ್ರಶ್ನಿಸಿದರು.
‘ಬೇಸಿಗೆ ಕಾಲ ಆಗಿರುವುದರಿಂದ ದಿನ ಬಳಕೆಗೆ ನೀರು ಹೆಚ್ಚು ಬೇಕಿದೆ. ದಿನನಿತ್ಯದ ಬಳಕೆಗೆ ನೀರು ಸಿಗುತ್ತಿಲ್ಲ. ಮಹಿಳೆಯರಿಗೆ ಸ್ನಾನ ಮಾಡಲು ನೀರು ದೊರೆಯುತ್ತಿಲ್ಲ’ ಎಂದು ಗ್ರಾಮದ ನಿವಾಸಿ ಮುನಿವೆಂಕಟಮ್ಮ ದೂರಿದರು. ಪ್ರತಿಭಟನೆಯಲ್ಲಿ ರಾಜೇಂದ್ರ, ಮಂಜುನಾಥ್, ದೇವಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.