ADVERTISEMENT

ಇ–ಕಾಮರ್ಸ್‌ ವಂಚನೆ: ₹ 1 ಲಕ್ಷ ಕಳೆದುಕೊಂಡ ಮಾಜಿ ಸೈನಿಕ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 15:57 IST
Last Updated 29 ಜುಲೈ 2023, 15:57 IST
ಅಮೆಜಾನ್‌ ಇ–ಕಾಮರ್ಸ್‌ ಕಂಪನಿ (ಪ್ರಾತಿನಿಧಿಕ ಚಿತ್ರ)
ಅಮೆಜಾನ್‌ ಇ–ಕಾಮರ್ಸ್‌ ಕಂಪನಿ (ಪ್ರಾತಿನಿಧಿಕ ಚಿತ್ರ)    

ಬೆಂಗಳೂರು: ಅಮೆಜಾನ್ ಇ– ಕಾಮರ್ಸ್ ಜಾಲತಾಣದಲ್ಲಿ ಕಾಯ್ದಿರಿಸಿದ್ದ ವಸ್ತುವನ್ನು ಮರಳಿಸಿ ಹಣ ವಾಪಸು ಪಡೆಯಲು ಪ್ರಯತ್ನಿಸಿದ್ದ ಮಾಜಿ ಸೈನಿಕರೊಬ್ಬರು ₹ 1 ಲಕ್ಷ ಕಳೆದುಕೊಂಡಿದ್ದು, ಈ ಸಂಬಂಧ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

‘ಹಲಸೂರು ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಮಾಜಿ ಸೈನಿಕರೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಮೆಜಾನ್‌ ಜಾಲತಾಣದಲ್ಲಿ ಆನ್‌ಲೈನ್‌ ಮೂಲಕ ₹ 5,499 ಪಾವತಿಸಿದ್ದ ಮಾಜಿ ಸೈನಿಕ, ಧ್ವನಿವರ್ಧಕ ಕಾಯ್ದಿರಿಸಿದ್ದರು. ತಾಂತ್ರಿಕ ಕಾರಣಗಳಿಂದ ಬುಕ್ಕಿಂಗ್ ರದ್ದಾಗಿತ್ತು. ಮೂರು ದಿನದೊಳಗೆ ಬ್ಯಾಂಕ್ ಖಾತೆಗೆ ಹಣ ವಾಪಸು ಬರುವುದಾಗಿ ಸಂದೇಶ ಬಂದಿತ್ತು.’

ADVERTISEMENT

‘ನಿಗದಿತ ದಿನದಂದು ಹಣ ವಾಪಸು ಬಂದಿರಲಿಲ್ಲ. ಗೂಗಲ್‌ನಲ್ಲಿ ದೊರೆತಿದ್ದ ಅಮೆಜಾನ್ ಸಹಾಯವಾಣಿಗೆ ದೂರುದಾರ ಕರೆ ಮಾಡಿದ್ದರು. ಆದರೆ, ಪ್ರತಿಕ್ರಿಯೆ ಬಂದಿರಲಿಲ್ಲ. ಕೆಲ ನಿಮಿಷಗಳ ನಂತರ ದೂರುದಾರರಿಗೆ ಕರೆ ಮಾಡಿದ್ದ ಆರೋಪಿ, ‘ನಾನು ಅಮೆಜಾನ್ ಪ್ರತಿನಿಧಿ. ನಿಮ್ಮ ಹಣ ವಾಪಸು ಕಳುಹಿಸುತ್ತೇನೆ. ನಾವು ಸೂಚಿಸುವ ಆ್ಯಪ್‌ವೊಂದನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ’ ಎಂದಿದ್ದ. ಅದನ್ನು ನಂಬಿ ದೂರುದಾರ, ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡಿದ್ದರು. ಇದಾದ ನಂತರ, ಖಾತೆಯಿಂದ ಹಂತ ಹಂತವಾಗಿ ₹ 1 ಲಕ್ಷ ವರ್ಗಾವಣೆ ಆಗಿದೆ. ಆರೋಪಿ ನಂಬರ್ ಸಹ ಸ್ವಿಚ್ ಆಫ್ ಆಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.