ADVERTISEMENT

ಕೃಷಿ ಮೇಳ: ಬಹೂಪಯೋಗಿ ‘ಫಾರ್ಮ್‌ ಎಕ್ಸ್‌–500’, ‘ಕ್ವಾಡ್ ಬೈಕ್’

ಖಲೀಲಅಹ್ಮದ ಶೇಖ
Published 16 ನವೆಂಬರ್ 2025, 23:38 IST
Last Updated 16 ನವೆಂಬರ್ 2025, 23:38 IST
ವಿದ್ಯುತ್‌ ಚಾಲಿತ ‘ಫಾರ್ಮ್‌ ಎಕ್ಸ್‌–500’
ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್.ಜಿ.
ವಿದ್ಯುತ್‌ ಚಾಲಿತ ‘ಫಾರ್ಮ್‌ ಎಕ್ಸ್‌–500’ ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಕೃಷಿ ಜಮೀನು ಹದ ಮಾಡಲು, ಕಳೆ ತೆಗೆಯಲು, ಗೊಬ್ಬರ ಸಾಗಿಸಲು ಟ್ರ್ಯಾಕ್ಟರ್‌ ಹಾಗೂ ಎತ್ತುಗಳನ್ನು ಬಳಸುವುದು ಸಾಮಾನ್ಯ. ಆದರೆ, ಇದಕ್ಕೆ ಪರ್ಯಾಯವಾಗಿ ವಿದ್ಯುತ್‌ ಚಾಲಿತ ‘ಫಾರ್ಮ್‌ ಎಕ್ಸ್‌–500’ ಎಂಬ ವಾಹನ ಅಭಿವೃದ್ದಿಪಡಿಸಲಾಗಿದೆ. ಇದರ ಜೊತೆಗೆ ತೆಂಗು, ಅಡಿಕೆ, ಮಾವು ಸೇರಿದಂತೆ ತೋಟಗಾರಿಕೆ ಬೆಳೆಗಳಲ್ಲಿ ಕಳೆ, ರಾಸಾಯನಿಕಗಳ ಸಿಂಪಡಣೆ ಮಾಡಲು ‘ಫಾರ್ಮ್‌ಲ್ಯಾಂಡ್‌ ಕ್ವಾಡ್‌ ಬೈಕ್‌’ ವಿನ್ಯಾಸಗೊಳಿಸಿದ್ದು, ಈ ವಾಹನಗಳು ರೈತರ ಗಮನ ಸೆಳೆದವು. 

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಆಯೋಜಿಸಿದ್ದ ಕೃಷಿ ಮೇಳದಲ್ಲಿ ಕೀಳಂಬಿ ಅಗ್ರಿ ಟೂಲ್ಸ್‌ ಸಂಸ್ಥೆ ಈ ವಾಹನಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿತ್ತು.

‘ಎಕ್ಸ್‌ ಮ್ಯಾಟಿಕ್‌ ಎಂಬ ಕಂಪನಿಯು ವಿದ್ಯುತ್‌ ಚಾಲಿತ ‘ಫಾರ್ಮ್‌ ಎಕ್ಸ್‌–500’ ವಾಹನವನ್ನು ವಿನ್ಯಾಸಗೊಳಿಸಿದೆ. ಇದನ್ನು ರಿಮೋಟ್‌ ಮೂಲಕ ನಿಯಂತ್ರಿಸಬಹುದು. ಇದು ಚಿಕ್ಕ ಟ್ರ್ಯಾಕ್ಟರ್‌ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಎಲ್ಲ ರೀತಿಯ ಬೆಳೆಗಳು ಹಾಗೂ ಕೃಷಿ ಭೂಮಿಯಲ್ಲಿ ಇದನ್ನು ಬಳಸಿಕೊಳ್ಳಬಹುದು. 500 ಕೆ.ಜಿ. ಭಾರವನ್ನು ಹೊತ್ತು ಸಾಗಲಿದ್ದು, ಕಳೆ ಹಾಗೂ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಸಹಕಾರಿ ಆಗಿದೆ’ ಎಂದು ಕಂಪನಿಯ ಸಿಇಒ ಮಿಥುನ್ ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

‘ಈ ವಾಹನಕ್ಕೆ ಒಂದು ವರ್ಷದ ವಾರಂಟಿ, ಎಲೆಕ್ಟ್ರಿಕ್ ಉಪಕರಣಗಳು ಸೇರಿದಂತೆ ಬ್ಯಾಟರಿಗೆ ಮೂರು ವರ್ಷದವರೆಗೆ ವಾರಂಟಿ ಇರಲಿದೆ. ಇದರ ಆರಂಭಿಕ ಬೆಲೆ ₹4.95 ಲಕ್ಷದಿಂದ ₹8.50 ಲಕ್ಷದವರೆಗೆ ಇದೆ. ಈ ವಾಹನ ಖರೀದಿಸಲು ಸಬ್ಸಿಡಿಯೂ ಇದೆ. ನಿರ್ವಹಣೆ ವೆಚ್ಚ ಕಡಿಮೆ, ಹಲವಾರು ಅಟ್ಯಾಚ್‌ಮೆಂಟ್‌ಗಳನ್ನು ಮಾಡಿಕೊಳ್ಳಬಹುದು. ಹೈಡ್ರಾಲಿಕ್ ಅನ್‌ ಲೋಡಿಂಗ್‌ ವ್ಯವಸ್ಥೆಯೂ ಇದೆ’ ಎಂದು ವಿವರಿಸಿದರು.

‘ಒಂದು ಬಾರಿ ಚಾರ್ಜ್‌ ಮಾಡಿದರೆ ಐದು ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. 4.8 ಕಿಲೋವಾಟ್‌ ಸಾಮರ್ಥ್ಯದ ಮೋಟಾರ್‌ ಅಳವಡಿಸಲಾಗಿದೆ’ ಎಂದರು.   

ಫಾರ್ಮ್‌ಲ್ಯಾಂಡ್‌ ಕ್ವಾಡ್ ಬೈಕ್‌:

ಇದನ್ನು ಟಿವಿಎಸ್‌ ಅಪಾಚಿ ವಾಹನದ 180 ಸಿ.ಸಿ ಸಾಮರ್ಥ್ಯದ ಎಂಜಿನ್‌ ಬಳಸಿ, ವಿನ್ಯಾಸಗೊಳಿಸಲಾಗಿದೆ. ಇದು 600 ಕೆ.ಜಿ.ಯಿಂದ 800 ಕೆ.ಜಿ.ವರೆಗಿನ ಭಾರ ಎಳೆದುಕೊಂಡು ಹೋಗುತ್ತದೆ. ಈ ವಾಹನದ ಜೊತೆಗೆ ಟ್ರಾಲಿ, ಕಳೆ ತೆಗೆಯುವ ಯಂತ್ರ ಹಾಗೂ ಔಷಧಿ ಸಿಂಪಡಣೆ ಮಾಡುವ ಸಲಕರಣೆಗಳನ್ನು ನೀಡಲಾಗುತ್ತದೆ. ₹2.90 ಲಕ್ಷ ಬೆಲೆ ನಿಗದಿಪಡಿಸಲಾಗಿದೆ’ ಎಂದು ಈ ವಾಹನ ವಿನ್ಯಾಸಗೊಳಿಸಿದ ಎಂಜಿನಿಯರ್‌ ಕೆ.ಎಸ್. ವಿಶ್ವನಾಥ್ ತಿಳಿಸಿದರು.

‘ಸಣ್ಣ ಮತ್ತು ಅತಿ ಸಣ್ಣ ರೈತರು ಟ್ರ್ಯಾಕ್ಟರ್‌ ಖರೀದಿ ಮಾಡುವುದು ಕಷ್ಟ. ಅದಕ್ಕೆ ಅವರು ಸಣ್ಣ ಕೃಷಿ ಯಂತ್ರಗಳಾದ ರೋಟಾವೇಟರ್‌, ಟಿಲ್ಲರ್‌ಗಳನ್ನು ಅವಲಂಬಿಸುತ್ತಾರೆ. ಆದರೆ, ಅವುಗಳ ಬಾಳಿಕೆ ಬಹಳ ಕಡಿಮೆ. ನಮ್ಮ ‘ಕ್ವಾಡ್‌ ಬೈಕ್‌’ ಚಿಕ್ಕ ಟ್ರ್ಯಾಕ್ಟರ್ ರೀತಿಯಲ್ಲೇ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ’ ಎಂದು ಹೇಳಿದರು.

ಫಾರ್ಮ್‌ಲ್ಯಾಂಡ್‌ ಕ್ವಾಡ್‌ ಬೈಕ್‌ ಕುರಿತು ಕಂಪನಿಯ ಸಿಬ್ಬಂದಿ ರೈತರಿಗೆ ಮಾಹಿತಿ ನೀಡಿದರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.