ADVERTISEMENT

ಎಲಿವೇಟೆಡ್ ರಸ್ತೆಗೆ ಮರುಜೀವ: ಬಿಜೆಪಿ ನಿಲುವು ಬದಲು

ಅನುದಾನಕ್ಕೆ ಬಿಜೆಪಿ ಶಾಸಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 21:50 IST
Last Updated 19 ಫೆಬ್ರುವರಿ 2020, 21:50 IST
ಎಲಿವೇಟೆಡ್‌ ಕಾರಿಡಾರ್‌ ಕುರಿತು ಚರ್ಚಿಸಲು ಸಿ.ಎನ್‌.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಬುಧವಾರ ಸಭೆ ನಡೆಯಿತು. ಶಾಸಕರಾದ ಎಲ್‌.ಎ.ರವಿಸುಬ್ರಹ್ಮಣ್ಯ, ಸಿ.ರಘು, ಉದಯ್‌ ಗರುಡಾಚಾರ್‌, ಸಚಿವ ಕೆ.ಗೋಪಾಲಯ್ಯ, ಶಾಸಕ ಅರವಿಂದ ಲಿಂಬಾವಳಿ ಇದ್ದಾರೆ.
ಎಲಿವೇಟೆಡ್‌ ಕಾರಿಡಾರ್‌ ಕುರಿತು ಚರ್ಚಿಸಲು ಸಿ.ಎನ್‌.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಬುಧವಾರ ಸಭೆ ನಡೆಯಿತು. ಶಾಸಕರಾದ ಎಲ್‌.ಎ.ರವಿಸುಬ್ರಹ್ಮಣ್ಯ, ಸಿ.ರಘು, ಉದಯ್‌ ಗರುಡಾಚಾರ್‌, ಸಚಿವ ಕೆ.ಗೋಪಾಲಯ್ಯ, ಶಾಸಕ ಅರವಿಂದ ಲಿಂಬಾವಳಿ ಇದ್ದಾರೆ.   
""

ಬೆಂಗಳೂರು: ವಿರೋಧ ಪಕ್ಷದಲ್ಲಿದ್ದಾಗ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯನ್ನು ವಿರೋಧಿಸಿದ್ದ ಬಿಜೆಪಿ, ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆ ಜಾರಿಗೆ ಮುಂದಾಗಿದೆ. ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಬೇಕು. ಮೊದಲ ಹಂತದ ಅನುಷ್ಠಾನಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಒದಗಿಸಬೇಕು ಎಂದು ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ.

ನಗರದ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಶಾಸಕರು ಮತ್ತು ಸಚಿವರು, ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಬುಧವಾರ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದರು. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಅಧಿಕಾರಿಗಳು ಈ ಯೋಜನೆ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು.

‘ನಮ್ಮ ಮೆಟ್ರೊ’ ಮಾದರಿಯಲ್ಲೇ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನೂ ವಿವಿಧ ಹಂತಗಳಲ್ಲಿ ನಿರ್ಮಿಸಬೇಕು. ಮೊದಲ ಹಂತದ ಕಾಮಗಾರಿಗಳಿಗೆ ಈ ಸಲದ ಬಜೆಟ್‍ನಲ್ಲಿ ಆದ್ಯತೆ ಕೊಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ADVERTISEMENT

ಈ ಯೋಜನೆಗೆ ಅಂದಾಜು ₹ 26 ಸಾವಿರ ಕೋಟಿಗೂ ಅಧಿಕ ಅನುದಾನ ಬೇಕು. ಒಮ್ಮೆಲೇ ಇಷ್ಟೊಂದು ಪ್ರಮಾಣದಲ್ಲಿ ಹಣ ಹೊಂದಿಸುವುದು ಕಷ್ಟ. ಹೀಗಾಗಿ ಮೊದಲ ಹಂತದಲ್ಲಿ ಕನಿಷ್ಠ ಪಕ್ಷ ಪೂರ್ವ- ಪಶ್ಚಿಮ (ಕೆ.ಆರ್.ಪುರ- ಯಶವಂತಪುರ) ಕಾರಿಡಾರ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇದಕ್ಕೆ ಈ ಬಾರಿಯ ಬಜೆಟ್‍ನಲ್ಲಿ ಅನುದಾನ ಒದಗಿಸುವಂತೆ ಮನವಿ ಮಾಡಲು ಶಾಸಕರು ನಿರ್ಧರಿಸಿದರು.

‘29 ಕಿ.ಮೀ ಉದ್ದದ ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ ಆರು ಪಥಗಳಿರುತ್ತವೆ. ಮೊದಲ ಹಂತದ ಈ ಕಾಮಗಾರಿಗೆ ₹ 9,300 ಕೋಟಿ ಬೇಕಾಗುತ್ತದೆ’ ಎಂದು ಅಶ್ವತ್ಥನಾರಾಯಣ ಸಭೆಯ ಗಮನಕ್ಕೆ ತಂದರು.

‘ಇದರ ನಂತರ ಮತ್ತೆ ಮೂರು ಹಂತಗಳಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಿಸಬೇಕಾಗುತ್ತದೆ. ಇದರ ಅನುಷ್ಠಾನಕ್ಕೆ 10 ವರ್ಷಗಳು ಬೇಕಾಗಬಹುದು. ಎಲಿವೇಟೆಡ್ ಕಾರಿಡಾರ್‌ನ ಕೆಲವು ಕಡೆ ಬಹು ಅಂತಸ್ತುಗಳ ಮಾರ್ಗಗಳು ನಿರ್ಮಾಣವಾಗಲಿವೆ. ಈ ಯೋಜನೆಯ ಭೂಸ್ವಾಧೀನಕ್ಕೇ ಅಂದಾಜು ₹ 10 ಸಾವಿರ ಕೋಟಿ ಬೇಕು. ವೆಚ್ಚವನ್ನು ಆದಷ್ಟು ಕಡಿಮೆ ಮಾಡಿ ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅವರು ವಿವರಿಸಿದರು.

‘ಕಾರಿಡಾರ್ ನಿರ್ಮಾಣದ ನಂತರ ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಅರ್ಧ ಗಂಟೆಯಲ್ಲಿ ತಲುಪಬಹುದು. ಇದರಿಂದ ನಗರದ ಕೇಂದ್ರ ಭಾಗದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆಯಾಗಲಿದೆ’ ಎಂದರು.

ನಗರದ ಹೊರವಲಯದ ಸಂಪರ್ಕಕ್ಕೆ 120 ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿಗೆ ಕನಿಷ್ಠ ₹ 1,400 ಕೋಟಿ ಬೇಕು. ಇದಕ್ಕೆ ಅನುದಾನ ಪಡೆಯುವ ಕುರಿತು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಚಿವರಾದ ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಬೈರತಿ ಬಸವರಾಜ್‌, ಶಾಸಕರಾದ ಅರವಿಂದ ಲಿಂಬಾವಳಿ, ಎಸ್.ಆರ್.ವಿಶ್ವನಾಥ್‌, ಉದಯ್ ಗರುಡಾಚಾರ್, ಎಸ್.ರಘು, ಎಲ್.ಎ.ರವಿಸುಬ್ರಹ್ಮಣ್ಯ, ಎಂ.ಸತೀಶ ರೆಡ್ಡಿ ಹಾಜರಿದ್ದರು.

ಮುನಿರತ್ನ ಹಾಜರ್‌: ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಮುನಿರತ್ನ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.

ವಲಸೆ ಬಂದ ನಾಯಕರಿಗೆ ಮಣೆ
ಮೊದಲ ಹಂತದಲ್ಲಿ ಪೂರ್ವ– ಪಶ್ಚಿಮ ಕಾರಿಡಾರ್‌ ಜಾರಿಗೊಳಿಸಿದರೆ ಬಿಜೆಪಿಗೆ ಇತ್ತೀಚೆಗೆ ವಲಸೆ ಬಂದ ನಾಯಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೆಚ್ಚು ಅನುಕೂಲವಾಗಲಿದೆ. ಈ ಕಾರಿಡಾರ್‌ ಕೆ.ಆರ್.ಪುರ, ಹಲಸೂರು, ಕಂಟೋನ್ಮೆಂಟ್, ಮೇಖ್ರಿ ವೃತ್ತ ಮೂಲಕ ಯಶವಂತಪುರಕ್ಕೆ ಸಂಪರ್ಕ ಕಲ್ಪಿಸಲಿದೆ. ಮೊದಲ ಹಂತದಲ್ಲಿ ಪೂರ್ವ–ಪಶ್ಚಿಮ ಕಾರಿಡಾರ್‌ ನಿರ್ಮಿಸುವ ಪ್ರಸ್ತಾಪ ಬಿಜೆಪಿಯ ಕೆಲವು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಟೆಂಡರ್‌ ರದ್ದುಪಡಿಸಿದ್ದ ಬಿಜೆಪಿ ಸರ್ಕಾರ
ಎಲಿವೇಟೆಡ್‌ ಕಾರಿಡಾರ್‌ ಯೋಜನೆಯ ಮೊದಲ ಹಂತದಲ್ಲಿ 21.54 ಕಿ.ಮೀ ಉದ್ದದ ಉತ್ತರ–ದಕ್ಷಿಣ ಕಾರಿಡಾರ್‌ ನಿರ್ಮಿಸಲು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ತೀರ್ಮಾನಿಸಿತ್ತು. ₹6,855 ಕೋಟಿ ಮೊತ್ತದ ಈ ಕಾಮಗಾರಿಯನ್ನು ಮೂರು ಪ್ಯಾಕೇಜ್‌ಗಳಲ್ಲಿ ಅನುಷ್ಠಾನಗೊಳಿಸಲು ಟೆಂಡರ್ ಕೂಡಾ ಆಹ್ವಾನಿಸಲಾಗಿತ್ತು. ಆದರೆ, ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಟೆಂಡರ್‌ ರದ್ದುಪಡಿಸಿದ್ದರು. ಈ ಯೋಜನೆಯನ್ನು ವಿರೋಧಿಸಿದ್ದ ಸಾಮಾಜಿಕ ಕಾರ್ಯಕರ್ತರು ಈ ನಡೆಯನ್ನು ಸ್ವಾಗತಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.