ADVERTISEMENT

ಅನಿಲ ಸೋರಿಕೆಯಾಗಿ ಸ್ಪೋಟ: ಐವರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 15:48 IST
Last Updated 13 ಜನವರಿ 2025, 15:48 IST
ಎಲ್‌ಪಿಜಿ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆಯಿಂದ ಸಂಭವಿಸಿದ ಸ್ಪೋಟದಿಂದ ಚೆಲ್ಲಾಪಿಲ್ಲಿಯಾಗಿರುವ ಮನೆಯ ಸಾಮಗ್ರಿಗಳು 
ಎಲ್‌ಪಿಜಿ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆಯಿಂದ ಸಂಭವಿಸಿದ ಸ್ಪೋಟದಿಂದ ಚೆಲ್ಲಾಪಿಲ್ಲಿಯಾಗಿರುವ ಮನೆಯ ಸಾಮಗ್ರಿಗಳು    

ಪೀಣ್ಯ ದಾಸರಹಳ್ಳಿ: ಚೊಕ್ಕಸಂದ್ರದ ಮನೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಸಂಭವಿಸಿದ ಸ್ಫೋಟದಿಂದ ಅಸ್ಸಾಂ ಮೂಲದ ದಂಪತಿ ಸೇರಿ ಐವರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.

ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಗಳ ಕಿಟಕಿ, ಬಾಗಿಲುಗಳಿಗೆ ಹಾನಿಯಾಗಿದೆ. ಕಿಟಕಿಗಳಿಗೆ ಅಳವಡಿಸಿದ್ದ ಬಟ್ಟೆಯ ಪರದೆಗಳು ಸುಟ್ಟು ಹೋಗಿವೆ.

ಅಸ್ಸಾಂ ಮೂಲದ ಬಿಜುದಾಸ್( 34) ಹಾಗೂ ಅಂಜಲಿ ದಾಸ್( 27) ದಂಪತಿ, ಅವರ ಮೂರು ವರ್ಷದ ಹೆಣ್ಣು ಮಗು ಮನುಶ್ರೀ, ಎದುರು ಮನೆಯಲ್ಲಿ ವಾಸವಿದ್ದ ಮಂಜುನಾಥ್(25), ತಿಪ್ಪೇರುದ್ರಸ್ವಾಮಿ(50), ಪಕ್ಕದ ಮನೆಯ ನಿವಾಸಿ ಶೋಭಾ(60 ) ಅವರು ಗಾಯಗೊಂಡಿದ್ದಾರೆ. ಎಲ್ಲರೂ ಬಾಡಿಗೆ ಮನೆಗಳಲ್ಲಿ ವಾಸವಿದ್ದರು.

ADVERTISEMENT

ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಬಿಜುದಾಸ್‌ ಹಾಗೂ ಅಂಜಲಿದಾಸ್‌ ದಂಪತಿಗೆ ಹೆಚ್ಚಿನ ಪ್ರಮಾಣದಲ್ಲಿ ಸುಟ್ಟ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರು ಅಂತಸ್ತಿನ ಕಟ್ಟಡದ ನೆಲಮಹಡಿಯ ಬಾಡಿಗೆ ಮನೆಯಲ್ಲಿ ಬಿಜುದಾಸ್ ದಂಪತಿ ವಾಸವಿದ್ದರು. ರಾತ್ರಿ ದಂಪತಿ ಹಾಗೂ ಮಗು ಊಟ ಮಾಡಿ ನಿದ್ರೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅನಿಲ ಸೋರಿಕೆ ಆಗಿರುವುದು ದಂಪತಿಯ ಗಮನಕ್ಕೆ ಬಂದಿಲ್ಲ.

ಬೆಳಿಗ್ಗೆ ಅಂಜಲಿದಾಸ್ ಹಾಲು ಕಾಯಿಸಲು ಅಡುಗೆ ಮನೆಗೆ ಹೋಗಿ ವಿದ್ಯುತ್ ದೀಪ ಬೆಳಗಿಸುತ್ತಿದ್ದಂತೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ. ಆಗ ದಂಪತಿ ಮತ್ತು ಮೂರು ವರ್ಷದ ಮಗಳು ಮನುಶ್ರೀಗೂ ಗಾಯಗಳಾಗಿವೆ. ಪಕ್ಕದ ಮನೆಯ ಶೋಭಾ ಎಂಬವರು ರಂಗೋಲಿ ಹಾಕುತ್ತಿದ್ದರು. ಅವರಿಗೂ ಸುಟ್ಟ ಗಾಯಗಳಾಗಿವೆ. ಸ್ಫೋಟದ ತೀವ್ರತೆಗೆ ಎದುರಿನ ಮನೆಯಲ್ಲಿ ಕೂತಿದ್ದ ಮಂಜುನಾಥ್‌ ಗಾಯಗಳಾವೆ. ಅದೇ ಮನೆಯಲ್ಲಿದ್ದ ಅಜ್ಜಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದರು.

ಬಚಾವಾದ ಸಿಬ್ಬಂದಿ: ಸ್ಫೋಟಕ್ಕೂ ಸ್ವಲ್ಪ ಹೊತ್ತಿನ ಮೊದಲು ಮನೆಯ ಮುಂದೆಯೇ ಬಿಬಿಎಂಪಿ ಕಸ ಸಂಗ್ರಹಿಸಲು ನಿಯೋಜಿಸುವ ಸಿಬ್ಬಂದಿ ತೆರಳಿದ್ದರು. ಅಪಾಯದಿಂದ ಅವರು ಪಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.