ADVERTISEMENT

ಪ್ರತಿಭಟನೆ ವೇಳೆ ವಶಕ್ಕೆ: ಮೈದಾನದಲ್ಲೇ ರೈತರ ಧರಣಿ

*ಪೆರಿಫೆರಲ್ ಹೊರವರ್ತುಲ ರಸ್ತೆ ನಿರ್ಮಾಣ ಯೋಜನೆ * ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 3:39 IST
Last Updated 13 ಜುಲೈ 2022, 3:39 IST
‘ಪೆರಿಫೆರಲ್ ಹೊರವರ್ತುಲ ರಸ್ತೆ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿ ರೈತರು ನಗರದ ಬಿಡಿಎ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು  – ಪ್ರಜಾವಾಣಿ ಚಿತ್ರ
‘ಪೆರಿಫೆರಲ್ ಹೊರವರ್ತುಲ ರಸ್ತೆ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿ ರೈತರು ನಗರದ ಬಿಡಿಎ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು  – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪೆರಿಫೆರಲ್ ಹೊರವರ್ತುಲ ರಸ್ತೆ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಕಾನೂನಿನ್ವಯ ಪರಿಹಾರ ನೀಡಬೇಕು. ಇಲ್ಲದಿದ್ದರೆ, ಯೋಜನೆಯನ್ನೇ ಕೈಬಿಟ್ಟು ಜಮೀನು ಮರಳಿಸಬೇಕು’ ಎಂದು ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದರು.

‘ಪೆರಿಫೆರಲ್ ಭೂ ಸ್ವಾಧೀನ ರೈತರ ಸಮಿತಿ’ ವತಿಯಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರೂ ಸೇರಿ 85 ರೈತರನ್ನು ವಶಕ್ಕೆ ಪಡೆದ ಪೊಲೀಸರು, ಆಡುಗೋಡಿ ಸಿಎಆರ್ ಮೈದಾನದಲ್ಲಿ ಇರಿಸಿದ್ದಾರೆ.

ಮೈದಾನದಿಂದ ತೆರಳಲು ನಿರಾಕರಿಸಿ ಧರಣಿ ಆರಂಭಿಸಿರುವ ರೈತರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗುವವರೆಗೂ ಸ್ಥಳದಿಂದ ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಮೈದಾನದಲ್ಲಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.

ADVERTISEMENT

‘ರೈತರು ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಬಿಡಿಎ ಕಚೇರಿ ಎದುರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಸ್ಥಳಕ್ಕೆ ಬಂದು ಅಹವಾಲು ಆಲಿಸಬೇಕಾದ ರಾಜ್ಯ ಸರ್ಕಾರದ ಪ್ರತಿನಿಧಿಗಳು ಪ್ರತಿಭಟನೆ ಹತ್ತಿಕ್ಕಲು ಪೊಲೀಸ್ ಬಲ ಬಳಸಿದ್ದಾರೆ. ಮೈದಾನದಿಂದ ನಾವು ಹೋಗುವುದಿಲ್ಲ. ಇಲ್ಲಿಯೇ ಅಹೋರಾತ್ರಿ ಧರಣಿ ಮುಂದುವರಿಸುತ್ತೇವೆ' ಎಂದು ಪ್ರತಿಭಟನಕಾರರು ಹೇಳಿದರು.

1,810 ಎಕರೆ ಭೂ ಸ್ವಾಧೀನ: ‘65 ಕಿ.ಮೀ ಪೆರಿಫೆರಲ್ ಹೊರವರ್ತುಲ ರಸ್ತೆ ನಿರ್ಮಾಣಕ್ಕಾಗಿ 1,810 ಎಕರೆ ಜಮೀನು ಸ್ವಾಧೀನ ಪಡೆಯಲು ರಾಜ್ಯ ಸರ್ಕಾರ ಹಾಗೂ ಬಿಡಿಎ 2005ರಲ್ಲಿ ಆದೇಶ ಹೊರಡಿಸಿತ್ತು. ಇಂಥ ಜಮೀನಿನಲ್ಲಿ 17 ವರ್ಷವಾದರೂ ಯೋಜನೆ ಕಾಮಗಾರಿ ಆರಂಭವಾಗಿಲ್ಲ. ಜಮೀನು ಖಾಲಿ ಬಿದ್ದಿದೆ. ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ’ ಎಂದು ಪ್ರತಿಭಟನಕಾರರು ಹೇಳಿದರು.

‘2013ರ ಭೂ-ಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆ ಪ್ರಕಾರ ಜಮೀನಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ, ಯೋಜನೆಯನ್ನೇ ಕೈಬಿಟ್ಟು ರೈತರಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಬೇಕು’ ಎಂದೂ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.