ADVERTISEMENT

ರೈತರು ಸಮಗ್ರ, ಸುಸ್ಥಿರ ಕೃಷಿಗೆ ಆದ್ಯತೆ ನೀಡಲಿ: ಕೃಷಿ ಸಚಿವ ಚಲುವರಾಯಸ್ವಾಮಿ

ರಾಷ್ಟ್ರೀಯ ರೈತರ ದಿನಾಚರಣೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 14:54 IST
Last Updated 23 ಡಿಸೆಂಬರ್ 2025, 14:54 IST
   

ಬೆಂಗಳೂರು: ‘ರೈತರು ಸಾವಯವ, ಸಮಗ್ರ ಹಾಗೂ ಸುಸ್ಥಿರ ಕೃಷಿಗೆ ಆದ್ಯತೆ ನೀಡಬೇಕು’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. 

ಸಮನ್ವಯ ಟ್ರಸ್ಟ್, ಫುಡ್‌ ಚೈನ್‌, ಕೃಷಿ ತಂತ್ರಜ್ಞರ ಸಂಸ್ಥೆ (ಐಎಟಿ) ಹಾಗೂ ದಕ್ಷಿಣ ಕನ್ನಡದ ಐಸಿಎಆರ್–ಕೆವಿಕೆಯ ಸಹಯೋಗದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಲು ಸರ್ಕಾರ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ನೆರವಾಗಲಿವೆ. ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು. ಕೃಷಿ ಕ್ಷೇತ್ರದಲ್ಲಿ ನೂತನ ಸಂಶೋಧನೆಗೆ ನೆರವು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿದರು.  

ADVERTISEMENT

ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಮಾತನಾಡಿ, ‘ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಯೋಜನೆಯ (ಪಿಎಂಎಫ್‌ಎಂಇ) ಅಡಿಯಲ್ಲಿ ಕಿರು ಆಹಾರ ಉದ್ದಿಮೆಗಳನ್ನು ಸ್ಥಾಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ₹15 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಕಿರು ಆಹಾರ ಘಟಕಗಳನ್ನು ಸ್ಥಾಪಿಸಿದ ನಂತರ ರೈತರಿಂದ ಕಚ್ಚಾ ಉತ್ಪನ್ನಗಳನ್ನು ಖರೀದಿಸಿ, ಅದಕ್ಕೆ ಮೌಲ್ಯವರ್ಧನೆ ಮಾಡಿ ಹೆಚ್ಚು ಆದಾಯ ಗಳಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಕೆಪೆಕ್‌ ಕೇಂದ್ರ ಕಚೇರಿಗೆ ಭೇಟಿ ನೀಡಬಹುದು’ ಎಂದು ಸಲಹೆ ನೀಡಿದರು.  

ಪ್ರಗತಿಪರ ರೈತ ಎಂ.ಸಿ. ರಂಗಸ್ವಾಮಿ ಮಾತನಾಡಿ, ‘ರಾಜ್ಯ ಸರ್ಕಾರ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಶೀತಲ ಗೃಹ ಸ್ಥಾಪಿಸಬೇಕು. ರೈತರು ಬೆಳೆದ ಹಣ್ಣು–ತರಕಾರಿಗಳನ್ನು ಇದರಲ್ಲಿ ಸಂಗ್ರಹ ಮಾಡಿ, ಉತ್ತಮ ಬೆಲೆಗೆ ಮಾರಾಟ ಮಾಡಲು ಸಹಾಯಕವಾಗುತ್ತದೆ’ ಎಂದರು. 

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ, ಅಬ್ದುಲ್ ಖಾದರ್ ನಡಕಟ್ಟಿನ್, ಸತ್ಯನಾರಾಯಣ ಬೇಲೇರಿ, ಅಮೈ ಮಹಾಲಿಂಗ್ ನಾಯಕ್‌ ಅವರಿಗೆ ಇದೇ ಸಂದರ್ಭದಲ್ಲಿ ಗ್ರಾಮೀಣ ನಾಯಕತ್ವ ಹಾಗೂ ಕೃಷಿ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಎ.ಬಿ. ಪಾಟೀಲ, ಸಮನ್ವಯ ಟ್ರಸ್ಟ್‌ನ ಸುಮಲತಾ ಕೆ.ಎಚ್., ಎಫ್‌ಕೆಸಿಸಿಐನ ಉಪಾಧ್ಯಕ್ಷ ಟಿ. ಸಾಯಿರಾಮ ಪ್ರಸಾದ್, ಎಫ್‌ಕೆಸಿಸಿಐನ ಅಗ್ರಿಟೆಕ್‌ ಸಮಿತಿಯ ಅಧ್ಯಕ್ಷೆ ರೂಪಾರಾಣಿ, ತೋಟಗಾರಿಕೆ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಸ್.ವಿ. ಹಿತ್ತಲಮನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.