ADVERTISEMENT

Krishi Mela 2025: ಪ್ರಾಣಿಗಳ ಮೂಳೆಯಿಂದ ಗೊಬ್ಬರ ತಯಾರಿಕೆ

ತೋಟಗಾರಿಕೆ, ಕೃಷಿ ಬೆಳೆಗಳ ಬೆಳವಣಿಗೆಗೆ ಸಹಕಾರಿ

ಖಲೀಲಅಹ್ಮದ ಶೇಖ
Published 15 ನವೆಂಬರ್ 2025, 21:25 IST
Last Updated 15 ನವೆಂಬರ್ 2025, 21:25 IST
ಮೂಳೆ ಗೊಬ್ಬರ
ಪ್ರಜಾವಾಣಿ ಚಿತ್ರಗಳು: ರಂಜು ಪಿ.
ಮೂಳೆ ಗೊಬ್ಬರ ಪ್ರಜಾವಾಣಿ ಚಿತ್ರಗಳು: ರಂಜು ಪಿ.   

ಬೆಂಗಳೂರು: ಸಾಮಾನ್ಯವಾಗಿ ಬೆಳೆಗಳಿಗೆ ಸಾವಯವ ಮತ್ತು ರಾಸಾಯನಿಕ ಗೊಬ್ಬರ ಬಳಸಲಾಗುತ್ತದೆ. ಆದರೆ, ಈಗ ಪ್ರಾಣಿಗಳ ಮೂಳೆಗಳಿಂದ (ಬೋನ್‌ ಮೀಲ್‌) ತಯಾರಿಸಿದ ಗೊಬ್ಬರ ಮಾರುಕಟ್ಟೆಗೆ ಬಂದಿದೆ. ಇದರ ಜೊತೆಗೆ ಕತ್ತೆಯ ಗಂಜಲ, ಗಧಾಮೃತ ಹಾಗೂ ಅದರ ಲದ್ದಿಯನ್ನು ಬಳಸಿಕೊಂಡು ಗೊಬ್ಬರ ತಯಾರಿಸಲಾಗಿದೆ. ಇದು ರೈತರನ್ನು ಆಕರ್ಷಿಸುತ್ತಿದೆ. 

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನಡೆಯುತ್ತಿರುವ ಕೃಷಿ ಮೇಳದಲ್ಲಿ ಪಿಪಿಆರ್ ಅಗ್ರಿ ಕನ್ಸಲ್‌ಟೆನ್ಸಿ ಕಂಪನಿಯ ಈ ಗೊಬ್ಬರವನ್ನು ಪ್ರದರ್ಶನಕ್ಕೆ ಇಡಲಾಗಿದೆ. 

‘ಅಡಿಕೆ, ತೆಂಗು, ರಬ್ಬರ್, ಶುಂಠಿ ಬೆಳೆಗಳಿಗೆ ಈ ಗೊಬ್ಬರ ಹೆಚ್ಚಿನ ರಂಜಕ ಅಂಶವನ್ನು ಒದಗಿಸುವುದರಿಂದ ಬೇಗ ಬೆಳವಣಿಗೆ ಹೊಂದುತ್ತವೆ. ಇದು ಸಾವಯವ ಗೊಬ್ಬರವಾಗಿದ್ದು, ಸಸ್ಯಗಳ ಬೆಳವಣಿಗೆಗೆ ಪೂರಕವಾಗಿದೆ. ಸಸ್ಯಗಳ ಜೀವಕೋಶಗಳನ್ನು ಬಲಪಡಿಸುವುದರ ಜೊತೆಗೆ ಆರೋಗ್ಯಕರ ಬೆಳೆವಣಿಗೆಗೂ ಉತ್ತೇಜನ ನೀಡುತ್ತದೆ’ ಎಂದು ಕಂಪನಿಯ ಮಾರಾಟಗಾರ ರವಿಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ಬೀಜ ಉತ್ಪಾದನೆ ಮತ್ತು ಸಸ್ಯದೊಳಗಿನ ಶಕ್ತಿಯ ವರ್ಗಾವಣೆ ಮಾಡುವಲ್ಲಿ ಬೋನ್‌ ಮೀಲ್‌ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕ ವಿಘಟನೆಯ ಪ್ರಕ್ರಿಯೆಯು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳಿಗೆ ಆಹಾರವನ್ನು ನೀಡುತ್ತದೆ. ಈ ಗೊಬ್ಬರದಲ್ಲಿ ಹೆಚ್ಚಿನ ಮ್ಯಾಗ್ನಿಷಿಯಂ, ಕಬ್ಬಿಣದಂತಹ ಪೋಷಕಾಂಶಗಳಿದ್ದು, ಭೂಮಿಗೆ ಹಾಕಿದ ಒಂದು ವಾರದೊಳಗೆ ಫಲಿತಾಂಶ ನೀಡುತ್ತದೆ’ ಎಂದರು.

ಕಸಾಯಿಖಾನೆಗಳಿಂದ ಮೂಳೆಗಳನ್ನು ತರಿಸಿಕೊಂಡು ಗೊಬ್ಬರ ತಯಾರಿಸಲಾಗುತ್ತಿದೆ. ಮೂಳೆಗಳನ್ನು ನೀರಿನಲ್ಲಿ ಹಾಕಿ ಕುದಿಸಲಾಗುತ್ತದೆ. ನಂತರ ಒಣಗಿಸಿ, ಮೂಳೆಗಳನ್ನು ಪುಡಿ ಮಾಡಿ ಗೊಬ್ಬರದ ರೂಪ ನೀಡಿ ಮಾರಾಟ ಮಾಡಲಾಗುತ್ತದೆ. ಇದನ್ನು ಎಲ್ಲ ರೀತಿಯ ಬೆಳೆಗಳಿಗೆ ಬಳಸಬಹುದು. ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆಯ ಒಂದು ಎಕರೆಗೆ 400 ಕೆ.ಜಿ ಮೂಳೆಗಳ ಗೊಬ್ಬರ ಹಾಕಬೇಕು. ಒಂದು ಎಕರೆಯಲ್ಲಿ ಬೆಳೆದ ತರಕಾರಿ ಬೆಳೆಗಳಿಗೆ 100 ರಿಂದ 200 ಕೆ.ಜಿ.ವರೆಗೆ ಹಾಕಬಹುದು. ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ, ಕಬ್ಬಿನ ಬೆಳೆಗೆ 50ರಿಂದ 100 ಕೆ.ಜಿ.ವರೆಗೆ ಬಳಸಲು ಶಿಫಾರಸು ಮಾಡುತ್ತೇವೆ. 50 ಕೆ.ಜಿ.ಗೆ ₹1 ಸಾವಿರ ದರ ನಿಗದಿಪಡಿಸಲಾಗಿದೆ’ ಎಂದು ವಿವರಿಸಿದರು. 

ಕತ್ತೆಯ ಗಂಜಲ

ಕತ್ತೆಯ ಗಂಜಲ ಗೊಬ್ಬರ ಆಕರ್ಷಣೆ

ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿರುವ ಕ್ಷೀರಸಾಗರ್ ಡಾಂಕಿ ಫಾರ್ಮ್‌ ಸಂಸ್ಥಾಪಕ ಆರ್. ರಂಗೇಗೌಡ ಅವರು ಕತ್ತೆಯ ಲದ್ದಿಯಿಂದ ಒಣ ಮತ್ತು ಹಸಿ ಗೊಬ್ಬರ ಗಂಜಲ ಹಾಗೂ ಗಧಾಮೃತ–01 ಎಂಬ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು ರೈತರು ಕುತೂಹಲದಿಂದ ವೀಕ್ಷಿಸಿದರು.

ಕತ್ತೆ ಗೊಬ್ಬರ ಗಂಜಲಿನಲ್ಲಿ ಮಣ್ಣಿಗೆ ಬೇಕಾಗುವ ಸತು ಕಬ್ಬಿಣಾಂಶ ಕ್ಯಾಲ್ಸಿಯಂ ಹೆಚ್ಚಿದ್ದು ಇವು ಬೆಳೆಗಳ ಗುಣಮಟ್ಟ ಸುಧಾರಿಸುವ ಮೂಲಕ ಇಳುವರಿ ಹೆಚ್ಚಿಸಲು ಸಹಕಾರಿಯಾಗಿವೆ.

ಕತ್ತೆಯ ಒಂದು ಕೆ.ಜಿ. ಗೊಬ್ಬರಕ್ಕೆ ₹50, ಒಂದು ಲೀಟರ್‌ ಗಂಜಲಿಗೆ ₹600 ಹಾಗೂ ಒಂದು ಲೀಟರ್‌ ಗಧಾಮೃತಕ್ಕೆ ₹550 ದರ ನಿಗದಿಪಡಿಸಲಾಗಿದೆ. ಇದನ್ನು ಎಲ್ಲ ರೀತಿಯ ಬೆಳೆಗಳಿಗೆ ಬಳಕೆ ಮಾಡಬಹುದು ಎಂದು ರಂಗೇಗೌಡ ತಿಳಿಸಿದರು. 

ಕತ್ತೆಯ ಲದ್ದಿಯಿಂದ ತಯಾರಿಸಿರುವ ಗೊಬ್ಬರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.