ADVERTISEMENT

ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಎಫ್ಐಆರ್

​ಪ್ರಜಾವಾಣಿ ವಾರ್ತೆ
Published 31 ಮೇ 2020, 21:26 IST
Last Updated 31 ಮೇ 2020, 21:26 IST
ಇಮ್ರಾನ್ ಪಾಷಾ
ಇಮ್ರಾನ್ ಪಾಷಾ   

ಬೆಂಗಳೂರು: ಕೊರೊನಾ ಸೋಂಕು ತಗುಲಿರುವ ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಆಸ್ಪತ್ರೆಗೆ ಹೋಗುವ ವೇಳೆ ಹೆಚ್ಚು ಜನರನ್ನು ಸೇರಿಸಿ ರೋಡ್‌ ಶೋ ವಾತಾವರಣ ಸೃಷ್ಟಿಸಿದ್ದು, ಈ ಸಂಬಂಧ ಇಮ್ರಾನ್ ಪಾಷಾ ಹಾಗೂ ಬೆಂಬಲಿಗರ ವಿರುದ್ಧ ಎಫ್‌ಐಆರ್‌ದಾಖಲಾಗಿದೆ.

‘ಬಿಬಿಎಂಪಿ ಆರೋಗ್ಯ ಅಧಿಕಾರಿ ನೀಡಿರುವ ದೂರು ಆಧರಿಸಿ ಸಾಂಕ್ರಾಮಿಕ ರೋಗ ಹರಡಲು ಪ್ರಯತ್ನಿಸಿದ ಹಾಗೂ ಅಕ್ರಮವಾಗಿ ಗುಂಪು ಸೇರಿಸಿದ್ದ ಆರೋಪದಡಿ ಇಮ್ರಾನ್ ಪಾಷಾ ಹಾಗೂ ಇತರರ ವಿರುದ್ಧ ಜಗಜೀವನ್‌ರಾಮ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪಶ್ಚಿಮ ‌ವಿಭಾಗದ ಡಿಸಿಪಿ ರಮೇಶ್ ಬಾನೋತ್‌ ತಿಳಿಸಿದ್ದಾರೆ.

ಇಮ್ರಾನ್ ಅವರು ಮೊದಲ ಬಾರಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಾಗ ಫಲಿತಾಂಶ ನೆಗೆಟಿವ್ ಬಂದಿತ್ತು. ಆದರೆ, ಇತ್ತೀಚೆಗೆ ನಡೆಸಿದ್ದ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿತ್ತು. ಇಮ್ರಾನ್ ಅವರನ್ನು ಆಸ್ಪತ್ರೆಗೆ ಕರೆಯ್ಯಲು ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಆಂಬುಲೆನ್ಸ್ ಸಮೇತ ಮನೆಗೆ ಹೋಗಿದ್ದರು.

ADVERTISEMENT

ಮನೆ ಎದುರು ಹಾಗೂ ಇಡೀ ರಸ್ತೆಯಲ್ಲಿ ಸೇರಿದ್ದ ಜನ, ಇಮ್ರಾನ್ ಅವರಿಗೆ ಜೈಕಾರ ಹಾಕಿದ್ದರು. ಕೊರೊನಾ ಇರುವುದು ದೃಢಪಟ್ಟಿದ್ದರೂ ಇಮ್ರಾನ್ ಅಂತರ ಕಾಯ್ದುಕೊಳ್ಳದೇ ಜನರ ಗುಂಪಿನಲ್ಲೇ ಓಡಾಡಿದ್ದರು. ಸ್ಥಳದಲ್ಲಿ ಗದ್ದಲದ ವಾತಾವರಣವೂ ಇತ್ತು. ಜನರೂ ಇಮ್ರಾನ್ ಹತ್ತಿರವೇ ಹೋಗಿ ಮಾತನಾಡಿದರು. ಹಲವರು ಮಾಸ್ಕ್ ಸಹ ಧರಿಸಿರಲಿಲ್ಲ.

ಆಂಬುಲೆನ್ಸ್ ಏರಿದ್ದ ಇಮ್ರಾನ್, ಅಲ್ಲಿಂದಲೇ ಜನರತ್ತ ಕೈ ಬೀಸಿದರು. ರೋಡ್ ಶೋ ರೀತಿಯಲ್ಲೇ ಆಂಬುಲೆನ್ಸ್‌ನಲ್ಲಿ ಹೋದರು. ಇಮ್ರಾನ್ ಹಾಗೂ ಜನರ ವರ್ತನೆಯು ಅಧಿಕಾರಿಗಳು ಹಾಗೂ ಪೊಲೀಸರ ಆತಂಕಕ್ಕೂ ಕಾರಣವಾಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಆರೋಗ್ಯ ಅಧಿಕಾರಿಯೇ ಇದೀಗ ದೂರು ನೀಡಿದ್ದಾರೆ.

ಆಸ್ಪತ್ರೆಗೆ ಹೋಗುವಾಗ ಚಿತ್ರೀಕರಿಸಲಾದ ಇಮ್ರಾನ್ ರೋಡ್‌ ಶೋ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.