
ಬೆಂಗಳೂರು: ನಗರದಲ್ಲಿ ಗುರುವಾರ ಬೆಳಿಗ್ಗೆ ದಟ್ಟ ಮಂಜು ಆವರಿಸಿದ್ದರಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಬೆಳಗಿನ ಜಾವ 4.30ರಿಂದಲೇ ದಟ್ಟ ಮಂಜಿನ ವಾತಾವರಣ ಕಾಣಿಸಿಕೊಂಡಿದ್ದರಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 48 ವಿಮಾನಗಳ ಸಂಚಾರ ವಿಳಂಬವಾಯಿತು.
ಒಂದು ವಿಮಾನ ಅತಿ ಹೆಚ್ಚು ಅಂದರೆ ಒಂದು ಗಂಟೆ 9 ನಿಮಿಷ ತಡವಾಗಿ ಬೆಂಗಳೂರಿನಿಂದ ಹೊರಟಿತು. 33 ವಿಮಾನಗಳು 15 ನಿಮಿಷ ತಡವಾಗಿ ಸಂಚಾರ ಆರಂಭಿಸಿದವು.
ಬೆಂಗಳೂರಿಗೆ ಬರಬೇಕಾಗಿದ್ದ ಎರಡು ವಿಮಾನಗಳ ಮಾರ್ಗವನ್ನು ಬದಲಾವಣೆ ಮಾಡಲಾಯಿತು. ಬೆಳಿಗ್ಗೆ 7.21ಕ್ಕೆ ಮಂಗಳೂರಿನಿಂದ ಆಗಮಿಸಬೇಕಾಗಿದ್ದ ಏರ್ ಇಂಡಿಯಾ ವಿಮಾನ( ಐಎಕ್ಸ್ 2923) ಚೆನ್ನೈಗೆ, ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ(ಎಐ 2653) ಕೊಚ್ಚಿನ್‌ಗೆ ಮಾರ್ಗ ಬದಲಾಯಿಸಲಾಯಿತು.
ಬೆಳಿಗ್ಗೆ 8ರವರೆಗೂ ಇದೇ ವಾತಾವರಣ ಕಂಡು ಬಂದಿದ್ದರಿಂದ ವಿಮಾನ ಸಂಚಾರ ನಿಧಾನವಾಯಿತು. ಬೆಳಿಗ್ಗೆ 10ರ ನಂತರ ಸಂಚಾರ ಸಹಜ ಸ್ಥಿತಿಗೆ ಮರಳಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.