ADVERTISEMENT

ನಿವೃತ್ತ ಡಿಜಿಪಿ, ಟ್ರಾಫಿಕ್‌ ಸಿಗ್ನಲ್‌ ಹರಿಕಾರ ಬಿ.ಎನ್‌.ಗರುಡಾಚಾರ್‌ ನಿಧನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 4:38 IST
Last Updated 28 ಮಾರ್ಚ್ 2025, 4:38 IST
   

ಬೆಂಗಳೂರು: ನಿವೃತ್ತ ಪೊಲೀಸ್‌ ಮಹಾನಿರ್ದೇಶಕ, ನಗರದ ಟ್ರಾಫಿಕ್‌ ಸಿಗ್ನಲ್‌ ಹರಿಕಾರ ಬಿ.ಎನ್‌.ಗರುಡಾಚಾರ್‌ (96) ಅವರು ವಯೋಸಹಜ ಕಾರಣದಿಂದ ಶುಕ್ರವಾರ ಮುಂಜಾನೆ ತಮ್ಮ ನಿವಾಸದಲ್ಲಿ ನಿಧನರಾದರು.

ಮೃತರಿಗೆ ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಶಾಸಕ ಬಿ.ಉದಯ್‌ ಗರುಡಾಚಾರ್‌ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಬಸವನಗುಡಿ ಅಂಚೆ ಕಚೇರಿಯ ಹಿಂಭಾಗದ ಕೃಷ್ಣ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಶುಕ್ರವಾರ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧ ಕ್ಷೇತ್ರಗಳ ಮುಖಂಡರು, ಪೊಲೀಸ್‌ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ADVERTISEMENT

ವಿಲ್ಸನ್‌ ಗಾರ್ಡನ್‌ ಚಿತಾಗಾರದಲ್ಲಿ ಶನಿವಾರ ಸಂಜೆ 4ಕ್ಕೆ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗರುಡಾಚಾರ್‌ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಗ್ರಾಮದವರು. ಪೊಲೀಸ್‌ ಇಲಾಖೆಗೆ ಸೇರಿದ ಬಳಿಕ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು.

‘ಬಡತನದಲ್ಲೇ ಶಿಕ್ಷಣ ಪೂರೈಸಿದರು. ಹಾಸನ, ಗೊರೂರು, ಮೈಸೂರಿನ ಪರಿಚಯಸ್ಥರ ಮನೆಯಲ್ಲಿ ಆಶ್ರಯ ಪಡೆದು ಸ್ನಾತಕೋತ್ತರ ಪದವಿ ಪಡೆದಿದ್ದರು. ಭೂಮಾಪಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ, ಅಬಕಾರಿ ಇನ್‌ಸ್ಪೆಕ್ಟರ್‌ ಕೆಲಸಕ್ಕೆ ಸೇರಿದ್ದರು. 1953ರಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಐಪಿಎಸ್‌ ಅಧಿಕಾರಿ ಆದರು’ ಎಂದು ಅವರ ಆತ್ಮೀಯರು ಹೇಳಿದರು.

ರಾಜ್ಯದ ಕೊಪ್ಪಳ, ತುಮಕೂರು, ಬಳ್ಳಾರಿ ಸೇರಿದಂತೆ ವಿವಿಧೆಡೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡಿದ್ದರು. ಬೆಂಗಳೂರು ನಗರದ ಡಿಸಿಪಿಯಾಗಿ (ಎಂಟು ವರ್ಷ), ನಗರ ಪೊಲೀಸ್‌ ಕಮಿಷನರ್ ಆಗಿ (ನಾಲ್ಕು ವರ್ಷ, ಎರಡು ತಿಂಗಳು), ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ (ಡಿಜಿಪಿ) (ಮೂರು ವರ್ಷ, ಎಂಟು ತಿಂಗಳು) ಕೆಲಸ ಮಾಡಿದ್ದರು.

ಬೆಂಗಳೂರು ನಗರದ ಮೊದಲ ಪೊಲೀಸ್ ಕಮಿಷನರ್ ಆಗಿದ್ದ ಸಿ.ಚಾಂಡಿ ಅವರ ಕಾಲದಲ್ಲಿ ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಡಿಸಿಪಿ ಆಗಿದ್ದ ಗರುಡಾಚಾರ್‌ ಅವರು, 1963ರಲ್ಲಿ ಎನ್.ಆರ್.ಜಂಕ್ಷನ್​ಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಿಗ್ನಲ್ ಅಳವಡಿಸಿದ್ದರು. ಇದು ಬೆಂಗಳೂರಿನ ಮೊದಲ ಟ್ರಾಫಿಕ್ ಸಿಗ್ನಲ್ ಆಗಿದೆ. ಇದರ ನೆನಪಿಗೆ ಟ್ರಾಫಿಕ್‌ ಸಿಗ್ನಲ್‌ ಅಳವಡಿಕೆ ಮಾಹಿತಿಯ ಫಲಕವನ್ನು 2021ರಲ್ಲಿ ಗರುಡಾಚಾರ್‌ ಅವರೇ ಅಂದಿನ ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರ ಸಮ್ಮುಖದಲ್ಲಿ ಉದ್ಘಾಟಿಸಿದ್ದರು.

ಗರುಡಾಚಾರ್‌ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆ.ಎ.ಟಿ) ಸದಸ್ಯರಾಗಿ ಕೆಲಸ ಮಾಡಿದ್ದರು. ಐಪಿಎಸ್‌ ಅಧಿಕಾರಿ ಅನ್ನು ಕೆಎಟಿಗೆ ನೇಮಿಸಿದ್ದು ಅದೇ ಮೊದಲು. ಗರುಡಾಚಾರ್ ಅವರು ಕೇಂದ್ರ, ರಾಜ್ಯ ಸರ್ಕಾರ ವಿವಿಧ ಪುರಸ್ಕಾರಗಳಿಗೆ ಪಾತ್ರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.