ADVERTISEMENT

ಕಾಶಿ ದರ್ಶನ ದ ನಾಲ್ಕನೇ ಟ್ರಿಪ್‌ ಜುಲೈ 29ಕ್ಕೆ: ರಾಮಲಿಂಗಾ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 20:31 IST
Last Updated 19 ಜುಲೈ 2023, 20:31 IST
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ   

ಬೆಂಗಳೂರು: ಪವಿತ್ರ ಕ್ಷೇತ್ರಗಳಾದ ವಾರಾಣಸಿ, ಅಯೋಧ್ಯೆ, ಪ್ರಯಾಗ್‌–ರಾಜ್‌ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ತೆರಳಲು ಅನುಕೂಲವಾಗುವಂತೆ ಪ್ಯಾಕೇಜ್‌ ರೂಪಿಸಲಾಗಿದೆ. ಈ ‘ಕರ್ನಾಟಕ ಭಾರತ್‌ ಗೌರವ ಕಾಶಿ ದರ್ಶನ’ ಯೋಜನೆಯಡಿ ವಿಶೇಷ ರೈಲಿನ ನಾಲ್ಕನೇ ಟ್ರಿಪ್‌  ಜುಲೈ 29ರಂದು ಆರಂಭಗೊಳ್ಳಲಿದ್ದು, ಯಾತ್ರಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳುವಂತೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.

ಒಬ್ಬ ಯಾತ್ರಾರ್ಥಿಗೆ ₹ 20,000ಗಳಂತೆ ಪ್ಯಾಕೇಜ್‌ ಇರಲಿದ್ದು, ಅದರಲ್ಲಿ ₹ 5,000ವನ್ನು ರಾಜ್ಯ ಸರ್ಕಾರ ಭರಿಸಲಿದೆ. ₹ 15,000 ಯಾತ್ರಾರ್ಥಿ ಪಾವತಿಸಬೇಕು. ಉಪಹಾರ, ಊಟ, ತಂಗುವಿಕೆ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆ ಒಳಗೊಂಡಿದೆ. ಏಳು ದಿನಗಳ ಪ್ರವಾಸ ಇದಾಗಿದೆ.

ಈ ಯೋಜನೆಯಡಿ 3 ಟ್ರಿಪ್‌ಗಳಲ್ಲಿ 1,644 ಯಾತ್ರಾರ್ಥಿಗಳು ಪ್ರವಾಸ ಮಾಡಿದ್ದಾರೆ. ರಾಜ್ಯ ಸರ್ಕಾರವು ಪ್ರತಿಯೊಬ್ಬರಿಗೆ ₹ 5,000ದಂತೆ ₹ 82 ಲಕ್ಷ ಸಹಾಯಧನ ವಿತರಿಸಿದೆ.

ADVERTISEMENT

ಜುಲೈ 29ರಂದು ಹೊರಡುವ ರೈಲಿನಲ್ಲಿ ಪ್ರವಾಸ ಮಾಡುವವರು ಐಆರ್‌ಟಿಸಿ ಪೋರ್ಟಲ್‌ ಮೂಲಕ ಟಿಕೆಟ್‌ ಕಾಯ್ದಿರಿಸಿಕೊಳ್ಳಬಹುದು. ವಿಶೇಷ ರೈಲಿನಲ್ಲಿ ಈಗ ಹೊಸತಾಗಿ ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗಿದೆ. ಅಲ್ಲೇ ಅಡುಗೆ ಮಾಡುವ ಅಡುಗೆ ಮನೆಯನ್ನು ಒಳಗೊಂಡಿದೆ. ಯಾತ್ರಾರ್ಥಿಗಳ ಆರೋಗ್ಯ ನೆರವಿಗಾಗಿ ಇಬ್ಬರು ವೈದ್ಯರು ಕೂಡ ಇರುವರು ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.