ಬೆಂಗಳೂರು: ಸಿನಿಮಾ ನಿರ್ಮಾಪಕ ಅರುಣ್ ರೈ ಸೇರಿದಂತೆ ಐವರ ವಿರುದ್ಧ ವಂಚನೆ ಆರೋಪದಡಿ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬಂಟ್ವಾಳದ ಉದ್ಯಮಿ ಟಿ. ವರದರಾಜ್ ಅವರಿಗೆ ₹9 ಕೋಟಿ ವಂಚಿಸಿರುವ ಆರೋಪದಡಿ 'ಜೀಟಿಗೆ' ತುಳು ಸಿನಿಮಾದ ನಿರ್ಮಾಪಕ ಅರುಣ್ ರೈ, ಅವರ ಸಹೋದರ ಅರ್ಜುನ್ ರೈ, ಕೆ.ಪಿ.ಶ್ರೀನಿವಾಸ್, ರಘು ಹಾಗೂ ಗೋವಿಂದಪ್ಪ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಗೇರುಬೀಜ ಸಂಸ್ಕರಣಾ ಘಟಕ ಹೊಂದಿದ್ದ ಉದ್ಯಮಿ ವರದರಾಜ್ ಅವರಿಗೆ ಕೋವಿಡ್ ಸಂದರ್ಭದಲ್ಲಿ ₹25 ಕೋಟಿ ನಷ್ಟವಾಗಿತ್ತು. ನಗರದ ತಾಜ್ ಹೋಟೆಲ್ನಲ್ಲಿ ಅರುಣ್ ರೈ ಪರಿಚಯವಾಗಿತ್ತು. ನಂತರ ವರದರಾಜ್ ಅವರನ್ನು ಸಂಪರ್ಕಿಸಿದ ಅರುಣ್, ‘ನನ್ನ ಉದ್ಯಮದಲ್ಲಿ ಹಣ ತೊಡಗಿಸಿದರೆ ನಷ್ಟದಿಂದ ಹೊರಬರಬಹುದು. ಕನ್ನಡದಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ‘ವೀರಕಂಬಳ’ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅದರ ಲಾಭಾಂಶದಲ್ಲಿ ₹60 ಲಕ್ಷ ರೂಪಾಯಿ ಕೊಡುತ್ತೇನೆ ಎಂದು ನಂಬಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ದೆಹಲಿಯಲ್ಲಿ ₹ 400 ಕೋಟಿ ಹೂಡಿಕೆ ಮಾಡಿದ್ದು, ತಮಿಳುನಾಡಿನ ದಿಂಡಿಗಲ್ ಕಾಳಿ ಸ್ವಾಮಿಯಿಂದ₹ 50 ಕೋಟಿ ಹಣ ಬರಬೇಕಿದೆ. ಪಳನಿ ದೇವಾಲಯದ ಟ್ರಸ್ಟ್‌ನಿಂದ ಸಾಲ ಕೊಡಿಸುತ್ತೇನೆ, ಜಾರ್ಖಂಡ್ ಸರ್ಕಾರದಿಂದ ₹50 ಕೋಟಿ ಕೆಲಸದ ಬಿಲ್ ಬಾಕಿ ಇದೆ. ಮಂಗಳೂರಿನ ಗೋದಾಮಿನಲ್ಲಿ ₹ 40 ಕೋಟಿ ಮೌಲ್ಯದಷ್ಟು ಗೋಡಂಬಿ ಇದೆ ಎಂದು ಹೇಳಿದ್ದ ಅರುಣ್ ರೈ ಅವರನ್ನು ನಂಬಿಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ಬೆಂಗಳೂರಿನ ಎಚ್ಎಸ್ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ರಾಜಾಜಿನಗರ, ತುಮಕೂರು, ಮೈಸೂರಿನ ಹಲವು ಕಡೆ ಕಚೇರಿಗಳಿಗೆ ಕರೆದೊಯ್ದು ಅವು ತನ್ನದೇ ಎಂದು ಹೇಳಿಕೊಂಡಿದ್ದರು. ಸ್ಪೇಸ್ ಎಕ್ಸ್ ಕಂಪನಿಯ ಸಂಸ್ಥಾಪಕ ಎಲಾನ್ ಮಸ್ಕ್ರ ಸಮನ್ವಯಕಾರ ಕೂಡ ನನ್ನ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದರು’ ಎಂದು ಆರೋಪಿಸಿದ್ದಾರೆ.
‘ಅರುಣ್ ರೈ ಹೇಳಿದ್ದ ಮಾತುಗಳನ್ನು ನಂಬಿ, ನನ್ನ ಆಪ್ತರು ಸೇರಿದಂತೆ ಹಲವು ಕಡೆಗಳಿಂದ ಸಾಲ ಮಾಡಿ ಸುಮಾರು ₹ 9 ಕೋಟಿ ಹಣವನ್ನು ಅವರ ಕಂಪನಿಗಳಿಗಾಗಿ ಹೂಡಿಕೆ ಮಾಡಿದ್ದೆವು. ಆದರೆ ಅರುಣ್ ರೈ ಮತ್ತು ಆತನ ಸಹಚರರು ನಕಲಿ ಕರಾರು ಪತ್ರಗಳನ್ನು ನೀಡಿದ್ದಾರೆ. ಲಾಭಾಂಶ ನೀಡುವುದಾಗಿ ವಂಚಿಸಿದ್ದಾರೆ’ ಎಂದು ವರದರಾಜ್ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.