ADVERTISEMENT

ಸಹಕಾರ ಬ್ಯಾಂಕ್‌ಗಳಿಂದ ಸಾಲ: ಶಾಸಕ ರಮೇಶ ಜಾರಕಿಹೊಳಿ ಸೇರಿ ಮೂವರ ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 15:43 IST
Last Updated 7 ಜನವರಿ 2024, 15:43 IST
ಸಚಿವ ರಮೇಶ್‌ ಜಾರಕಿಹೊಳಿ
ಸಚಿವ ರಮೇಶ್‌ ಜಾರಕಿಹೊಳಿ    

ಬೆಂಗಳೂರು: ಸಹಕಾರ ಬ್ಯಾಂಕ್‌ಗಳಲ್ಲಿ ಹಂತ ಹಂತವಾಗಿ ₹232.88 ಕೋಟಿ ಸಾಲ ಪಡೆದು, ಮರು ಪಾವತಿಸದೆ ವಂಚಿಸಿದ ಆರೋಪದ ಅಡಿ ಗೋಕಾಕ್‌ ಶಾಸಕ ರಮೇಶ ಎಲ್‌. ಜಾರಕಿಹೊಳಿ ಹಾಗೂ ಇಬ್ಬರು ಸಕ್ಕರೆ ಕಾರ್ಖಾನೆ ಕಂಪನಿಯ ನಿರ್ದೇಶಕರ ವಿರುದ್ದ ಇಲ್ಲಿನ ವಿ.ವಿ. ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ನಗರದ ಚಾಮರಾಜಪೇಟೆಯ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ರಾಜಣ್ಣ ಅವರು ನೀಡಿದ ದೂರು ಆಧರಿಸಿ, ಬೆಳಗಾವಿ ಜಿಲ್ಲೆಯ ಗೋಕಾಕ್‌ನ ಸೌಭಾಗ್ಯ ಲಕ್ಷ್ಮಿ ಶುಗರ್ಸ್‌ ಕಂಪನಿ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ರಮೇಶ ಎಲ್‌. ಜಾರಕಿಹೊಳಿ, ಕಂಪನಿ ನಿರ್ದೇಶಕರಾದ ವಸಂತ್‌ ವಿ. ಪಾಟೀಲ ಹಾಗೂ ಶಂಕರ್‌ ವಿ. ಪಾವಡೆ ವಿರುದ್ಧ ಪ್ರಕರಣ ದಾಖಲಾಗಿದೆ.

‘ಸಕ್ಕರೆ ಕಾರ್ಖಾನೆ ಸ್ಥಾಪನೆ, ವಿಸ್ತರಣೆ ಹಾಗೂ ನಿರ್ವಹಣೆಗಾಗಿ ಅವಧಿ ಸಾಲ, ದುಡಿಯುವ ಬಂಡವಾಳ ಸಾಲ ಪಡೆದುಕೊಂಡಿದ್ದರು. ಬ್ಯಾಂಕ್‌ ವಿಧಿಸಿದ್ದ ಷರತ್ತುಗಳಿಗೆ ಒಪ್ಪಿ ಸಾಲ ಪಡೆದುಕೊಂಡಿದ್ದ ಮೂವರು ಸಾಲ ಮರುಪಾವತಿಸಿಲ್ಲ. ಮೂವರ ವಿರುದ್ಧ ವಂಚನೆ, ಮೋಸ, ನಂಬಿಕೆ ದ್ರೋಹ ಆರೋಪದ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಹಂತ ಹಂತವಾಗಿ ಸಾಲ:

‘ಸಾಲಕ್ಕಾಗಿ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. ಬ್ಯಾಂಕ್‌ ಷರತ್ತಿಗೆ ಅನುಗುಣವಾಗಿ 2013ರ ಜುಲೈ 12ರಿಂದ 2017ರ ಮಾರ್ಚ್‌ 31ರ ನಡುವೆ ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕ್ ಹಾಗೂ ಅದರ ಸಮೂಹ ಬ್ಯಾಂಕ್‌ಗಳಾದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ತುಮಕೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮತ್ತು ಉತ್ತರ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಹಂತ ಹಂತವಾಗಿ ಒಟ್ಟು ₹232.88 ಕೋಟಿ ಸಾಲ ಪಡೆದುಕೊಂಡಿದ್ದಾರೆ. ಆದರೆ, ಅಸಲು ಮತ್ತು ಬಡ್ಡಿಯನ್ನು ಮರು ಪಾವತಿಸದ ಕಾರಣ 2023 ರ ಆ.31ಕ್ಕೆ ಬಾಕಿ ಮೊತ್ತ ₹439.7 ಕೋಟಿಗೆ ಏರಿಕೆಯಾಗಿದೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಷರತ್ತುಗಳ ಉಲ್ಲಂಘನೆ:

ಬ್ಯಾಂಕ್‌ನಿಂದ ಸಾಲ ಪಡೆಯುವಾಗ ಸಾಲ ಮರುಪಾವತಿ ಆಗುವವರೆಗೂ ಬ್ಯಾಂಕಿನ ಅನುಮತಿಯಿಲ್ಲದೆ ಸೌಭಾಗ್ಯ ಲಕ್ಷ್ಮಿ ಶುಗರ್ಸ್‌ ಕಂಪನಿಯ ಆಡಳಿತ ಮಂಡಳಿ, ವ್ಯವಸ್ಥಾಪಕ ನಿರ್ದೇಶಕ, ನಿರ್ದೇಶಕರನ್ನು ಬದಲಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಆರೋಪಿಗಳು ಬ್ಯಾಂಕ್‌ಗೆ ಮೋಸ ಮಾಡುವ ಉದ್ದೇಶದಿಂದ ಬ್ಯಾಂಕ್‌ಗೆ ಮಾಹಿತಿ ನೀಡದೆ ಕಂಪನಿಯ ಆಡಳಿತ ಮಂಡಳಿಯಲ್ಲಿ ತಮ್ಮ ಹುದ್ದೆಗಳಿಂದ ಹೊರಬಂದು ಸಂಬಂಧವಿಲ್ಲದ ವ್ಯಕ್ತಿಗಳನ್ನು ಕಂಪನಿಗೆ ನಿರ್ದೇಶಕರನ್ನಾಗಿ ನೇಮಿಸಿದ್ದಾರೆ. ಷರತ್ತು ಉಲ್ಲಂಘಿಸಿ ಬ್ಯಾಂಕ್‌ಗೆ ಮೋಸ ಎಸಗಿದ್ದಾರೆ’ ಎಂದು ದೂರಿನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.