ಬೆಂಗಳೂರು: ದಟ್ಟಣೆಯ ಕಿರಿಕಿರಿ, ಕೆಲಸದ ಒತ್ತಡ ಹಾಗೂ ಸಮಯದ ಅಭಾವದಿಂದ ಅಗತ್ಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳನ್ನು ಮನೆಗೇ ತರಿಸಿಕೊಳ್ಳುವವರ ಸಂಖ್ಯೆ ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿದೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಮನೆಗೇ ವಸ್ತುಗಳೂ ತಲುಪುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು, ವಿವಿಧ ಹೆಸರಿನಲ್ಲಿ ನೂತನ ಆ್ಯಪ್ ಸೃಷ್ಟಿಸಿಕೊಂಡು ಜನರ ಹಣವನ್ನು ದೋಚುತ್ತಿದ್ದಾರೆ.
ಕೃತಕ ಬುದ್ಧಿಮತ್ತೆಯ(ಎ.ಐ) ಮಿಮಿಕ್ರಿ, ಒಎಲ್‌ಎಕ್ಸ್, ಬ್ಯಾಂಕ್ ವಹಿವಾಟಿನ ಒನ್ ಟೈಂ ಪಾಸ್‌ವರ್ಡ್(ಒಟಿಪಿ), ‘ಡಿಜಿಟಲ್ ಅರೆಸ್ಟ್’, ತಮ್ಮ ಹೆಸರಿನಲ್ಲಿ ಕೊರಿಯರ್ ಮೂಲಕ ಮಾದಕ ವಸ್ತುಗಳು ಪೂರೈಕೆ ಆಗುತ್ತಿವೆ ಎಂದು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಬೆದರಿಸಿ ಹಣ ದೋಚುತ್ತಿದ್ದ ಸೈಬರ್ ವಂಚಕರು, ಇದೀಗ ಫುಡ್ ಡೆಲಿವರಿ ಆ್ಯಪ್ ಮೂಲಕವೂ ವಂಚನೆಗೆ ಇಳಿದಿದ್ದಾರೆ. ಇದು ಹೊಸದಾಗಿ ನಡೆಯುತ್ತಿರುವ ವಂಚನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಬೆಳಿಗ್ಗೆಯೇ ತುರ್ತು ಕೆಲಸಕ್ಕೆ ಹೋಗಬೇಕಿತ್ತು. ತಿಂಡಿಗೆ ಆರ್ಡರ್ ಮಾಡಿದ್ದೆ. ತಿಂಡಿ ಸಕಾಲದಲ್ಲಿ ಬಾರದೇ ಇದ್ದಾಗ ಗ್ರಾಹಕರ ಸೇವಾ ಕೇಂದ್ರಕ್ಕೆ ಕರೆ ಮಾಡಿದ್ದೆ. ಅಲ್ಲಿದ್ದ ವ್ಯಕ್ತಿ ಯಾವುದೋ ಆ್ಯಪ್ ಕ್ಲಿಕ್ ಮಾಡುವಂತೆ ಹೇಳಿದ್ದ. ಅದನ್ನು ಕ್ಲಿಕ್ ಮಾಡಿದ ಬಳಿಕ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಡಿತವಾಯಿತು. ಇನ್ನೂ ಸಂಜೆ ಮನೆಗೆ ಬರುವುದು ತಡವಾಗಿತ್ತು. ಅಡುಗೆ ಮಾಡಲು ಮನೆಯಲ್ಲಿ ಯಾವುದೇ ಸಾಮಗ್ರಿ ಇರಲಿಲ್ಲ. ಆ್ಯಪ್‌ನಲ್ಲಿ ತರಕಾರಿ, ಹಾಲು, ಮೊಸರು ಆರ್ಡರ್ ಮಾಡಿದ್ದೆ. ಅದರಲ್ಲಿ ಕೆಲವು ಪದಾರ್ಥ ಇರಲಿಲ್ಲ. ಬಳಿಕ ಗ್ರಾಹಕರ ಸೇವಾ ಕೇಂದ್ರಕ್ಕೆ ಕರೆ ಮಾಡಿದ್ದೆ. ಆ ಕಡೆಯಿಂದ ವ್ಯಕ್ತಿ ನೀಡಿದ ಸೂಚನೆ ಪಾಲಿಸಿದ್ದರಿಂದ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಕಳೆದುಕೊಳ್ಳುವಂತಾಯಿತು ಎಂದು ಹೇಳಿಕೊಂಡು ಠಾಣೆಗೆ ಬರುತ್ತಿರುವ ಸಾಫ್ಟ್‌ವೇರ್ ಉದ್ಯೋಗಿಗಳು, ಪೇಯಿಂಗ್ ಗೆಸ್ಟ್ ನಿವಾಸಿಗಳು ಹಾಗೂ ಗೃಹಿಣಿಯರ ಸಂಖ್ಯೆ ಹೆಚ್ಚಾಗಿದೆ’ ಎಂದು ಸೈಬರ್ ಅಪರಾಧ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಹೊಸ ವಿಧಾನದ ವಂಚನೆಯಲ್ಲಿ ಹಣ ಕಳೆದುಕೊಂಡವರು ಸೈಬರ್ ಅಪರಾಧ ಹಾಗೂ ಕಾನೂನು ಸುವ್ಯವಸ್ಥೆ ಠಾಣೆಗಳಿಗೆ ಬಂದು ದೂರು ನೀಡುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಹಣ ವಾಪಸ್ ನೀಡುವುದಾಗಿ ಹೇಳಿ ವಂಚನೆ: ‘ಆ್ಯಪ್‌ವೊಂದರಲ್ಲಿ ಅಲಿ ಅಸ್ಗರ್ ರಸ್ತೆಯ ಕೃಷ್ಣ ಅಪಾರ್ಟ್‌ಮೆಂಟ್‌ನ ನಿವಾಸಿ ಸುನಿತಾ ಖುರಾನ ಅವರು ಎರಡು ಕೆ.ಜಿ. ಕಿತ್ತಳೆ ಹಣ್ಣು, 250 ಗ್ರಾಂ. ಕೊತ್ತಂಬರಿ ಸೊಪ್ಪು, ಒಂದು ಕೆ.ಜಿ ಐಸ್‌ಕ್ರೀಂಗೆ ಆನ್‌ಲೈನ್‌ನಲ್ಲಿ ಅರ್ಡರ್ ಮಾಡಿದ್ದರು. ಎರಡು ಕೆ.ಜಿ ಕಿತ್ತಳೆ ಹಣ್ಣು, 250 ಗ್ರಾಂ. ಕೊತ್ತಂಬರಿ ಸೊಪ್ಪು ಅನ್ನು ಡೆಲಿವರಿ ಹುಡುಗ ಮನೆಗೆ ತಲುಪಿಸಿದ್ದ. ಆದರೆ, ಐಸ್ ಕ್ರೀಂ ಬಂದಿರಲಿಲ್ಲ. ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದ ಅವರು ಅಲ್ಲಿ ಸಿಕ್ಕಿದ ಸೇವಾ ಕೇಂದ್ರದ ಹೆಸರಿನಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ ಆನ್‌ಲೈನ್ ಆರ್ಡರ್‌ಗೆ ಸಂಬಂಧಿಸಿದ ಆ್ಯಪ್ ನಿರ್ವಹಣೆಯ ಸಿಬ್ಬಂದಿ ಎಂಬುದಾಗಿ ಹೇಳಿಕೊಂಡಿದ್ದ. ಐಸ್ ಕ್ರೀಂ ಮನೆಗೆ ತಲುಪದ ಬಗ್ಗೆ ಮಹಿಳೆ ತಿಳಿಸಿದಾಗ ₹400 ವಾಪಸ್ ನೀಡುವುದಾಗಿ ಆತ ತಿಳಿಸಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆ್ಯಪ್ ಡೌನ್‌ಲೋಡ್‌ಗೆ ಸೂಚನೆ: ‘ಮೊಬೈಲ್‌ನಲ್ಲಿ ಕೆಲವು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಕರೆ ಸ್ವೀಕರಿಸಿದ್ದ ವ್ಯಕ್ತಿ ಸೂಚನೆ ನೀಡಿದ್ದ. ಅದರಂತೆ ದೂರುದಾರ ಮಹಿಳೆ, ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಅದರ ಮೇಲೆ ಕ್ಲಿಕ್ ಮಾಡಿದ್ದರು. ಕ್ಷಣಾರ್ಧದಲ್ಲಿ ಅವರ ಖಾತೆಯಲ್ಲಿದ್ದ ಹಣ ಖಾಲಿ ಆಗಿತ್ತು’ ಎಂದು ಮೂಲಗಳು ತಿಳಿಸಿವೆ.
ಪ್ರತ್ಯೇಕ ಆ್ಯಪ್ ಸೃಷ್ಟಿಸಿ ಮೋಸ
‘ಕೆಲಸದ ಒತ್ತಡದಲ್ಲಿ ಇರುವವರು ಆನ್‌ಲೈನ್ ಮೂಲಕ ಆಹಾರ ಪದಾರ್ಥಗಳನ್ನು ಮನೆಗೇ ತರಿಸಿಕೊಳ್ಳುತ್ತಿದ್ದಾರೆ. ನಂಬಿಕೆಗೆ ಅರ್ಹವಾದ ಆ್ಯಪ್‌ಗಳನ್ನೇ ಡೌನ್‌ಲೋಡ್ ಮಾಡಿಕೊಂಡು ಆರ್ಡರ್ ಮಾಡಬೇಕು. ಸಿಕ್ಕ ಸಿಕ್ಕ ಆ್ಯಪ್‌ನಲ್ಲಿ ಆರ್ಡರ್ ಮಾಡಿದರೆ ಹಣ ಕಳೆದುಕೊಳ್ಳುವ ಸಾಧ್ಯತೆಯಿದೆ. ಹಣ ಕಳೆದುಕೊಂಡಿರುವ ಸುನಿತಾ ಖುರಾನ ಅವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕರೆ ಮಾಡಿದ್ದ ವ್ಯಕ್ತಿ ನೀಡಿದ ಸೂಚನೆಯಂತೆ ಆ್ಯಪ್ ಮೇಲೆ ಕ್ಲಿಕ್ ಮಾಡಿದ ಕೆಲವೇ ಕ್ಷಣಗಳಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ₹40 ಸಾವಿರ ಡ್ರಾ ಆಗಿತ್ತು.–ಸುನಿತಾ ಖುರಾನ ಹಣ ಕಳೆದುಕೊಂಡವರು
ಸೈಬರ್ ಅಪರಾಧ ತಡೆ ಘಟಕ ಆರಂಭ
ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಆ ಪ್ರಕರಣಗಳನ್ನು ತಡೆಗಟ್ಟಲು ಸೈಬರ್ ಅಪರಾಧ ತಡೆ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ. ದೇಶದಲ್ಲೇ ಮೊದಲ ಸೈಬರ್ ತನಿಖಾ ಘಟಕ ಇದಾಗಿದೆ.
ತಂತ್ರಜ್ಞಾನದ ಅತಿಯಾದ ಬಳಕೆ ಹಾಗೂ ಅವಲಂಬನೆಯಿಂದ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಹಳೆಯ ವೃತ್ತಿಪರ ಅಪರಾಧಗಳಾದ ಡಕಾಯಿತಿ, ದರೋಡೆ ಹಾಗೂ ಇತರೆ ಭೌತಿಕ ಕಳ್ಳತನಗಳನ್ನು ಹಿಂದಿಕ್ಕಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ವರದಿ ಆಗುತ್ತಿವೆ.
ಸೈಬರ್ ಅಪರಾಧ ತಡೆಗಟ್ಟಲು ರಾಜ್ಯದಲ್ಲಿ ಪ್ರತ್ಯೇಕ ಸೈಬರ್ ಅಪರಾಧ ತಡೆ ಘಟಕ ಸ್ಥಾಪಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಸರ್ಕಾರವು ಮನವಿಗೆ ಸ್ಪಂದಿಸಿ ಘಟಕವನ್ನು ಸ್ಥಾಪಿಸಿದೆ.
ಈ ಘಟಕಕ್ಕೆ 193 ಹುದ್ದೆಗಳನ್ನು ಮಂಜೂರು ಮಾಡುವಂತೆ ಹಾಗೂ ಘಟಕಕ್ಕೆ ₹75 ಕೋಟಿ ಅನುದಾನ ನೀಡುವಂತೆ ಕೋರಲಾಗಿತ್ತು. ಆದರೆ, ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಪರಿಣಾಮಕಾರಿಯಾಗಿ ಸೈಬರ್ ಅಪರಾಧ ತಡೆಗಟ್ಟುವ ಕೆಲಸ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ ₹5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಐಡಿ ವಿಭಾಗದಲ್ಲಿನ ಡಿಜಿಪಿ ಮಾದಕ ವಸ್ತು ಮತ್ತು ಸೈಬರ್ ಅಪರಾಧ ಹುದ್ದೆಯನ್ನು ಬೇರ್ಪಡಿಸಿ ಡಿಜಿಪಿ ಸೈಬರ್ ಕಮಾಂಡ್ ಎಂದು ಪದನಾಮೀಕರಿಸ ಲಾಗಿದೆ. ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಪ್ರಸ್ತುತವಿರುವ ಕಚೇರಿ ಹಾಗೂ ಮೂಲಸೌಕರ್ಯ ಬಳಸಿಕೊಂಡು ಕೆಲಸ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಐಜಿಪಿ, ಎಸ್.ಪಿ ಸೇರಿದಂತೆ ಇತರೆ ಸಿಬ್ಬಂದಿಯನ್ನು ಹಂತ ಹಂತವಾಗಿ ನೇಮಕ ಮಾಡಲು ಸರ್ಕಾರ ಉದ್ದೇಶಿಸಿದೆ.
ಸೈಬರ್ ಭದ್ರತೆ, ಸೈಬರ್ ಅಪರಾಧ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಆನ್‌ಲೈನ್ ಅಪರಾಧಗಳು, ಡಿಜಿಟಲ್ ಅರೆಸ್ಟ್ ಸೇರಿದಂತೆ ಸೈಬರ್ ವಂಚನೆಗಳು, ಡೀಪ್ ಫೇಕ್ ಸಂಬಂಧಿಸಿದಂತೆ ದಾಖಲಾಗುವ ಪ್ರಕರಣಗಳ ಕುರಿತು ಈ ಘಟಕವು ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.