ADVERTISEMENT

ಕ್ಯಾನ್ಸರ್: ರೋಗಿಗಳಿಗೆ ಉಚಿತ ಟೆಲಿ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 19:47 IST
Last Updated 27 ಸೆಪ್ಟೆಂಬರ್ 2020, 19:47 IST
   

ಬೆಂಗಳೂರು: ಸರ್ಕಾರೇತರ ಸಂಸ್ಥೆಯಾಗಿರುವ ಇಂಡಿಯನ್ ಕ್ಯಾನ್ಸರ್ ಸೊಸೈಟಿಯು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತ ಟೆಲಿ ಸಮಾಲೋಚನೆ ಸೇವೆಯನ್ನು ಪ್ರಾರಂಭಿಸಿದೆ.

ಕೋವಿಡ್‌ ಕಾರಣ ಆಸ್ಪತ್ರೆಗಳಲ್ಲಿ ಹೊರ ರೋಗಿ ವಿಭಾಗವು ಪೂರ್ಣ‍ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಹಲವು ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಮನಗಂಡ ಸಂಸ್ಥೆಯುವೈದ್ಯರ ನೆರವಿನೊಂದಿಗೆಸಹಾಯವಾಣಿ ಮೂಲಕ ರೋಗಿಗಳಿಗೆ ಅಗತ್ಯ ಆರೋಗ್ಯ ಸಲಹೆಗಳನ್ನು ನೀಡಲಾರಂಭಿಸಿದೆ. ಭಾನುವಾರ ಹೊರತುಪಡಿಸಿ ಉಳಿದ ದಿನ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಸೇವೆ ಲಭ್ಯ.

‘ಕೋವಿಡ್‌ ಕಾಣಿಸಿಕೊಂಡ ನಂತರ ಕ್ಯಾನ್ಸರ್‌ ರೋಗಿಗಳು ಆಸ್ಪತ್ರೆಯಲ್ಲಿ ಕೀಮೋಥೆರಪಿ ಸೇರಿದಂತೆ ವಿವಿಧ ಚಿಕಿತ್ಸೆಗಳನ್ನು ನಿಯಮಿತವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ರೋಗಿಗಳು ಹಾಗೂ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ. ಕೆಲವರು ಮಾನಸಿಕವಾಗಿ ಕುಗ್ಗಿ, ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಧೈರ್ಯ ತುಂಬಲು ಟೆಲಿ ಮೆಡಿಸಿನ್ ಸೇವೆ ಪ್ರಾರಂಭಿಸಿದ್ದೇವೆ’ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಕಾಂಚನಾ ಬ್ಯಾನರ್ಜಿ ತಿಳಿಸಿದರು.

ADVERTISEMENT

‘ಕ್ಯಾನ್ಸರ್ ರೋಗ ಯಾವ ಹಂತದಲ್ಲಿದೆ ಎಂಬುದನ್ನು ನಿರ್ಧರಿಸಿ, ಸಲಹೆ ನೀಡಲಾಗುತ್ತದೆ. ಕ್ಯಾನ್ಸರ್‌ ತಜ್ಞರೊಂದಿಗೆ ದೂರವಾಣಿ ಸಮಾಲೋಚನೆ ನಡೆಸಲೂ ಅವಕಾಶ ಕಲ್ಪಿಸುತ್ತೇವೆ. ವೈದ್ಯರು ಪರ್ಯಾಯ ಚಿಕಿತ್ಸೆಗಳ ಬಗ್ಗೆಯೂ ಸೂಚಿಸುತ್ತಾರೆ. ವೈದ್ಯರು ರೋಗಿಯ ಚಿಕಿತ್ಸಾ ಇತಿಹಾಸ ಪರಿಶೀಲಿಸಲು ಇಚ್ಛಿಸಿದಲ್ಲಿ ವ್ಯಕ್ತಿಯ ದೂರವಾಣಿ ಸಂಖ್ಯೆಗೆ ವೆಬ್‌ಸೈಟ್‌ ಲಿಂಕ್‌ ಇರುವ ಸಂದೇಶವನ್ನು ಕಳುಹಿಸಲಾಗುತ್ತದೆ. ಅದರಲ್ಲಿ ಚಿಕಿತ್ಸೆ ಇತಿಹಾಸವನ್ನು ಅಪ್‌ಲೋಡ್ ಮಾಡಬಹುದು. ಔಷಧ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯರ ಬರಹವನ್ನು ಇದೇ ರೀತಿ ಕಳುಹಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಸಹಾಯವಾಣಿ ಸಂಖ್ಯೆ: 08047182786

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.