
ದೇವನಹಳ್ಳಿ: ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ವೇಳೆ ಮಾರಾಟಕ್ಕೆ ವಿದೇಶದಿಂದ ಕಳ್ಳಸಾಗಣೆ ಮಾಡುತ್ತಿದ್ದ ₹10.70 ಕೋಟಿ ಮೌಲ್ಯದ 30 ಕೆ.ಜಿಗೂ ಹೆಚ್ಚು ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.
ಮಾದಕ ವಸ್ತು ವಿರೋಧಿ ಆಂದೊಲನ ಅಭಿಯಾನ ಭಾಗವಾಗಿ ವೈಮಾನಿಕ ಗುಪ್ತಚರ ದಳ ಹಾಗೂ ಕಸ್ಟಮ್ಸ್ ಅಧಿಕಾರಿಗಳು ನಡೆಸುತ್ತಿದ್ದ ತಪಾಸಣೆ ವೇಳೆ ಆರೋಪಿಗಳು ಬಲೆಗೆ ಬಿದಿದ್ದಾರೆ. ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ.
ಮೊದಲ ಪ್ರಕರಣದಲ್ಲಿ ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕ ಸಾಗಿಸುತ್ತಿದ್ದ ₹2.16 ಕೋಟಿ ಮೌಲ್ಯದ 6.19 ಕೆ.ಜಿ ಹೈಡ್ರೊ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮೊತ್ತೊಂದು ಪ್ರಕರಣದಲ್ಲಿ ₹70.70 ಲಕ್ಷ ಮೌಲ್ಯದ 2.02 ಕೆ.ಜಿ ತೂಕ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳ ಜಪ್ತಿ ಮಾಡಿದ್ದಾರೆ.
ಮೂರನೇ ಪ್ರಕರಣದಲ್ಲಿ ಮೂವರು ಪ್ರಯಾಣಿಕರಿಂದ ಒಟ್ಟು 22.04 ಕೆ.ಜಿ ಹೈದ್ರೊ ಗಾಂಜಾ ಸಿಕಿದ್ದು ಅದರ ಮೌಲ್ಯ ₹7.71 ಕೋಟಿ ಎಂದು ಅಂದಾಜಿಸಲಾಗಿದೆ. ಎಲ್ಲಾ ಆರೋಪಿಗಳ ಮೇಲೆ ಮಾದಕ ವಸ್ತುಗಳ ನಿಯಂತ್ರಣ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಹೈದ್ರೊ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬ್ಯಾಂಕಾಕ್ ಮೂಲದಿಂದಲೇ ಹೆಚ್ಚು ಗಾಂಜಾ ಭಾರತಕ್ಕೆ ಅದರಲ್ಲೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಳ್ಳ ಸಾಗಣೆಯಾಗುತ್ತಿದೆ. ಈ ಬಗ್ಗೆ ವೈಮಾನಿಕ ಗುಪ್ತಚರ ದಳ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಎಚ್ಚರವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.