ADVERTISEMENT

ಬೆಂಗಳೂರು | ಕಸ: ಬಳಕೆದಾರರ ಶುಲ್ಕ ಪರಿಷ್ಕರಣೆ

ಬಿಬಿಎಂಪಿ: ‘ವಸತಿಯೇತರ ಉಪಯೋಗದ ಸ್ವತ್ತುಗಳಿಗೆ ಪ್ರತಿ ವರ್ಷಕ್ಕೆ’ ಎಂದು ಬದಲಾಯಿಸಿ ಆದೇಶ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 0:00 IST
Last Updated 9 ಏಪ್ರಿಲ್ 2025, 0:00 IST
<div class="paragraphs"><p>ಬಿಬಿಎಂಪಿ ಕೇಂದ್ರ ಕಚೇರಿ</p></div>

ಬಿಬಿಎಂಪಿ ಕೇಂದ್ರ ಕಚೇರಿ

   

ಬೆಂಗಳೂರು: ವಸತಿಯೇತರ ಉಪಯೋಗದ ಸ್ವತ್ತುಗಳಿಗೆ ಘನತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕವನ್ನು (ಡಬ್ಲ್ಯುಯುಎಫ್‌) ಪ್ರತಿ ತಿಂಗಳಿಗೆ ಎಂದು ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸಿರುವ ಬಿಬಿಎಂಪಿ, ವಾರ್ಷಿಕ ಶುಲ್ಕ ಎಂದು ಪರಿಷ್ಕರಿಸಿದೆ.

ವಸತಿಯೇತರ ಕಟ್ಟಡಗಳಿಗೆ ₹2 ಸಾವಿರದಿಂದ ₹35 ಲಕ್ಷದವರೆಗೆ ಪ್ರತಿ ತಿಂಗಳು ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಏಪ್ರಿಲ್‌ 5ರ ಆದೇಶದಲ್ಲಿ ತಿಳಿಸಲಾಗಿತ್ತು. ಅದನ್ನು ಪರಿಷ್ಕರಿಸಿ ವಾರ್ಷಿಕವಾಗಿ ವಿಧಿಸುವ ಶುಲ್ಕ ಎಂದು ಪ್ರಕಟಿಸಲಾಗಿದೆ.

ADVERTISEMENT

2024ರಲ್ಲಿ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಉಪ ನಿಮಯಗಳನ್ನು (ಬೈ–ಲಾ) ಅಧಿಸೂಚಿಸಲಾಗಿದ್ದು, ಅದರಲ್ಲಿ ಯಾರಿಗೆ ಎಷ್ಟು ಸೆಸ್‌ ಹಾಗೂ ಬಳಕೆದಾರರ ಶುಲ್ಕವನ್ನು ವಿಧಿಸಬೇಕು ಎಂಬುದನ್ನು ಪ್ರಕಟಿಸಲಾಗಿದೆ. ಅದಕ್ಕಿಂತ ಕಡಿಮೆ ಶುಲ್ಕವನ್ನು ಬಿಬಿಎಂಪಿ ಐದು ವರ್ಷದ ನಂತರ ಜಾರಿ ಮಾಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. 

ಬೈ–ಲಾದಂತೆ, ಎಲ್ಲ ವಸತಿ ಕಟ್ಟಡಗಳಿಗೆ ಪ್ರತಿ ತಿಂಗಳಿಗೆ ₹200 ಬಳಕೆದಾರರ ಶುಲ್ಕವಿದೆ. ಬಿಬಿಎಂಪಿ ಜಾರಿ ಮಾಡಿರುವ ಬಳಕೆದಾರರ ಶುಲ್ಕದಂತೆ 600 ಚದರಡಿಯಷ್ಟು ಕಟ್ಟಡ ಹೊಂದಿರುವವರಿಗೆ ತಿಂಗಳಿಗೆ ₹10, 601 ಚದರಡಿಯಿಂದ 1000 ಚದರಡಿವರೆಗಿನ ಕಟ್ಟಡಕ್ಕೆ ತಿಂಗಳಿಗೆ ₹50 ವಿಧಿಸಲಾಗಿದೆ. ಬಡವರ್ಗದ ಜನರಿಗೆ ಇದು ಹೆಚ್ಚಿನ ಹೊರೆಯಾಗುವುದಿಲ್ಲ ಎಂಬುದು ಅಧಿಕಾರಿಗಳ ಮಾತು.

ಸ್ವಂತ ಕಟ್ಟಡದಲ್ಲಿ ತಾವು ವಾಸವಿದ್ದು, ಮೇಲೆ ಅಥವಾ ಕೆಳಗೆ ಮನೆಗಳನ್ನು ಬಾಡಿಗೆಗೆ ನೀಡಿದ್ದರೆ ಆ ಕಟ್ಟಡವನ್ನು ವಸತಿಯೇತರ (ಮಿಶ್ರ ಉಪಯೋಗದ ಸ್ವತ್ತು) ಎಂದು ನಿರ್ಧರಿಸಲಾಗಿದೆ. ಹೀಗಾಗಿ, ಆಸ್ತಿ ತೆರಿಗೆಯ ಗರಿಷ್ಠ ಶೇ60ರಷ್ಟನ್ನು ಬಳಕೆದಾರರ ಶುಲ್ಕ ಪಾವತಿಸಬೇಕಾಗುತ್ತದೆ. ಕಟ್ಟಡವನ್ನು ಸಂಪೂರ್ಣ ಬಾಡಿಗೆಗೇ ನೀಡಿದ್ದರೆ ಆಸ್ತಿ ತೆರಿಗೆಯ ಗರಿಷ್ಠ ಶೇ 30ರಷ್ಟು ಪಾವತಿಬೇಕಾಗುತ್ತದೆ.

ಹೋಟೆಲ್‌, ಲಾಡ್ಜ್‌, ತಾರಾ ಹೋಟೆಲ್‌ಗಳಿಗೆ ಚದರಡಿಗೆ ಬಳಕೆದಾರರ ಶುಲ್ಕವನ್ನು ನಿಗದಿ ಮಾಡಿದ್ದು, ಈ ಕಟ್ಟಡಗಳಿಗೂ ಆಸ್ತಿ ತೆರಿಗೆಯ ಗರಿಷ್ಠ ಶೇ 60ರಷ್ಟು ಮಿತಿಯನ್ನು ನಿಗದಿಪಡಿಸಲಾಗಿದೆ. ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ಹೊಂದಿರುವ ಈ ವರ್ಗದ ಕಟ್ಟಡಗಳು ಬಳಕೆದಾರರ ಶುಲ್ಕ ಪಾವತಿಸುವಂತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ವಿವರಿಸಿದ್ದಾರೆ.

30 x40 ಅಡಿ ನಿವೇಶನಕ್ಕೆ ವರ್ಷಕ್ಕೆ ₹720 ಶುಲ್ಕ

ಖಾಲಿ ನಿವೇಶನಗಳಿಗೆ 2024-25 ಆರ್ಥಿಕ ವರ್ಷದವರೆಗೆ ಘನತ್ಯಾಜ್ಯ ಸೆಸ್‌ ಕೂಡ ಇರಲಿಲ್ಲ. 2025–26ನೇ ಸಾಲಿನಿಂದ ಸೆಸ್‌ ಹಾಗೂ ಬಳಕೆದಾರರ ಶುಲ್ಕವನ್ನು ವಿಧಿಸಲಾಗಿದೆ. ವಾರ್ಷಿಕವಾಗಿ ಪ್ರತಿ ಚದರಡಿಗೆ 60 ಪೈಸೆ ಬಳಕೆದಾರರ ಶುಲ್ಕವನ್ನು ಖಾಲಿ ನಿವೇಶನದ ಮಾಲೀಕರು ಪಾವತಿಸಬೇಕಾಗಿದೆ.

1,200 ಚದರಡಿಯ (30 ಅಡಿ x 40 ಅಡಿ) ನಿವೇಶನಕ್ಕೆ ತ್ಯಾಜ್ಯ ನಿರ್ವಹಣಾ ಬಳಕೆದಾರರ ಶುಲ್ಕ ವರ್ಷಕ್ಕೆ ₹720 ಆಗುತ್ತದೆ. ಆದರೆ, ಘನತ್ಯಾಜ್ಯ ನಿರ್ವಹಣೆ (ಎಸ್‌ಡಬ್ಲ್ಯುಎಂ) ಬೈ–ಲಾದಂತೆ, ಪ್ರತಿ ಚದರಡಿಗೆ 20 ಪೈಸೆಯನ್ನು ತಿಂಗಳಿಗೆ ನಿಗದಿಪಡಿಸಲಾಗಿತ್ತು. ಇದರಂತೆ, ಪ್ರತಿ ತಿಂಗಳಿಗೆ ₹240ರಂತೆ ವರ್ಷಕ್ಕೆ ₹2,880 ಪಾವತಿಸಬೇಕಾಗಿತ್ತು.

ಬಿಬಿಎಂಪಿ ಅನುಷ್ಠಾನಗೊಳಿಸಿರುವ ಬಳಕೆದಾರರ ಶುಲ್ಕದಂತೆ ₹720 ಪಾವತಿಸಬೇಕಾಗುತ್ತದೆ. ಈ ಹಿಂದೆ ಸೆಸ್‌ ಹಾಗೂ ಬಳಕೆದಾರರ ಶುಲ್ಕ ಎರಡೂ ಇಲ್ಲದ್ದರಿಂದ ಈ ಬಾರಿ, ಆಸ್ತಿ ತೆರಿಗೆ ಶೇ 20ರಿಂದ ಶೇ 200ರಷ್ಟು ಹೆಚ್ಚಾಗಲಿದೆ.

ರಸ್ತೆಯಲ್ಲಿ ಉಗುಳಿದರೆ ₹1,000 ದಂಡ

ಬಿಬಿಎಂಪಿ ಎಸ್‌ಡಬ್ಲ್ಯಎಂ ಬೈ–ಲಾದಂತೆ, ರಸ್ತೆ, ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಹಾಕುವುದು, ಉಗುಳಿದರೆ ₹1,000 ದಂಡ ಹಾಕಬಹುದು. ಮತ್ತೆ ಅದೇ ಕಾರ್ಯ ಮಾಡಿದರೆ ಪ್ರತಿ ಬಾರಿಗೂ ₹2,000 ದಂಡ ಹಾಕಬಹುದಾಗಿದೆ.

ಮನೆಗಳ ತ್ಯಾಜ್ಯವನ್ನು ವಿಂಗಡಿಸಿ ನೀಡದಿದ್ದರೆ, ಮಿಶ್ರ ತ್ಯಾಜ್ಯವನ್ನು ಅಧಿಕಾರಿಗಳು ಸೇರಿದಂತೆ
ಯಾರೇ ಸಂಗ್ರಹಿಸಿದರೂ ₹2 ಸಾವಿರ ದಂಡ ವಿಧಿಸಬಹುದು. ನಂತರದ ಪ್ರಕರಣಗಳಿಗೆ ₹3 ಸಾವಿರ ದಂಡವಿದೆ.

ಸಣ್ಣ ವಾಣಿಜ್ಯ ಕಟ್ಟಡದವರು ತ್ಯಾಜ್ಯವನ್ನು ಅನಧಿಕೃತ ವ್ಯಕ್ತಿಗಳಿಗೆ ನೀಡಿದರೆ ಮೊದಲ ಬಾರಿಗೆ ₹5 ಸಾವಿರ, ದೊಡ್ಡ ವಾಣಿಜ್ಯ ಕಟ್ಟಡವರಿಗೆ ಮೊದಲು ₹10 ಸಾವಿರ, ಅಧಿಕ (ಬಲ್ಕ್‌) ತ್ಯಾಜ್ಯ ಉತ್ಪಾದಕರಿಗೆ ₹15 ಸಾವಿರ ದಂಡ ವಿಧಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.