
ಬೆಂಗಳೂರು: ‘ಮುಂಬರುವ ಜಿಬಿಎ ಚುನಾವಣೆಯಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎಲ್ಲ 11 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಈಗಿನಿಂದಲೇ ಸಿದ್ಧತೆ ಆರಂಭವಾಗಿದೆ’ ಎಂದು ಕ್ಷೇತ್ರದ ಶಾಸಕರೂ ಆಗಿರುವ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದರು.
ಹೆಬ್ಬಾಳದ ಕೆ.ಟಿ. ಟ್ರಾನ್ಸ್‌ಪೋರ್ಟ್ ರಸ್ತೆ, ವಿ. ನಾಗೇನಹಳ್ಳಿ 3ನೇ ಅಡ್ಡರಸ್ತೆಯ ಕನಕನಗರ, ಮನೋರಾಯನಪಾಳ್ಯದ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ಬಳಿ, ದಿಣ್ಣೂರು ಚಾಮುಂಡಿನಗರದ ಅಂಬೇಡ್ಕರ್ ವೃತ್ತ ಮತ್ತು ಮಠದಹಳ್ಳಿಯ ಮುನೇಶ್ವರ ದೇವಸ್ಥಾನ ರಸ್ತೆಯ ಅರಳಿಮರ ಗುಂಡು ಪ್ರದೇಶದಲ್ಲಿ ಎಲ್‌ಇಡಿ ವಿದ್ಯುತ್ ದೀಪ ಅಳವಡಿಕೆ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.‘ಜಿಬಿಎ ಅಡಿ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುವ ಎಲ್ಲ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಕ್ಷೇತ್ರದಲ್ಲಿ ಯಾವುದೇ ಮೂಲ ಸೌಕರ್ಯ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ’ ಎಂದು ಭರವಸೆ ನೀಡಿದರು.
‘ಕ್ಷೇತ್ರದಲ್ಲಿ 10 ಸಾವಿರ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರು ಪೂರೈಕೆಗೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಉದ್ಯಾನವನಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹30 ಕೋಟಿ ಅನುದಾನ ಬಿಡುಗಡೆ ಮಾಡಿದೆ’ ಎಂದು ತಿಳಿಸಿದರು.
‘ಚುನಾವಣೆ ಸಂದರ್ಭದಲ್ಲಷ್ಟೇ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಪ್ರತಿಪ್ರಕ್ಷ ನಾಯಕರು, ನಂತರ ಮಾಯವಾಗುತ್ತಾರೆ. ಜಾತಿ ರಾಜಕಾರಣ ಮಾಡುವ ಮೂಲಕ ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತುತ್ತಾ ಸಂಘರ್ಷ ಉಂಟು ಮಾಡುವ ರಾಜಕಾರಣಿಗಳನ್ನು ಜನತೆ ದೂರವಿಡಬೇಕು’ ಎಂದು ವಾಗ್ದಾಳಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.