ಜಿಕೆವಿಕೆ
ಬೆಂಗಳೂರು: ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣದ ಐದು ಎಕರೆ ಜಾಗದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅಂತರರಾಷ್ಟ್ರೀಯ ಪುಷ್ಪ ಮಾರುಕಟ್ಟೆ ನಿರ್ಮಿಸಲು ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ. ಇದಕ್ಕಾಗಿ 942 ಮರಗಳನ್ನು ಕಡಿಯುವ ಸಾಧ್ಯತೆ ಇದೆ.
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಸೇರಿದ 125 ಎಕರೆ ಜಾಗ ಜಿಕೆವಿಕೆ ಆವರಣದಲ್ಲಿ ಇದೆ. ಈ ಪೈಕಿ ಐದು ಎಕರೆ ಜಾಗವನ್ನು ಅಂತರರಾಷ್ಟ್ರೀಯ ಪುಷ್ಪ ಮಾರುಕಟ್ಟೆ ನಿರ್ಮಿಸಲು ನೀಡುವಂತೆ ತೋಟಗಾರಿಕೆ ಇಲಾಖೆ ಪ್ರಸ್ತಾವ ಸಲ್ಲಿಸಿದೆ. ಆದರೆ, ಐದು ಎಕರೆ ಜಾಗದಲ್ಲಿ ಹಲಸು, ಗೋಡಂಬಿ, ಮಾವು ಮತ್ತು ತೆಂಗು ಸೇರಿದಂತೆ 942 ಮರಗಳಿದ್ದು, ವಾರ್ಷಿಕ ₹4.85 ಲಕ್ಷ ಆದಾಯ ಬರುತ್ತಿದೆ. ಇವುಗಳನ್ನು ಕಡಿಯದೇ ಹಾಗೆಯೇ ಉಳಿಸಿಕೊಳ್ಳಬೇಕು ಎಂದು ತೋಟಗಾರಿಕೆ ವಿಶ್ವವಿದ್ಯಾಲಯ ತಿಳಿಸಿದೆ.
ಮಾರುಕಟ್ಟೆ ಕಾರ್ಯಾರಂಭ ಮಾಡಿದ ನಂತರ ಬರುವ ಆದಾಯದಲ್ಲಿ ಶೇಕಡ 50ರಷ್ಟನ್ನು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ನೀಡಬೇಕು. ರಸ್ತೆ, ಕಾಂಪೌಂಡ್ ಸೇರಿದಂತೆ ಸಿವಿಲ್ ಕಾಮಗಾರಿಗಳನ್ನು ಮಾಡಿಕೊಡಬೇಕು. ಈ ಬಗ್ಗೆ ವಿಶ್ವವಿದ್ಯಾಲಯದೊಂದಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ), ತೋಟಗಾರಿಕೆ ಇಲಾಖೆ ಒಪ್ಪಂದ ಮಾಡಿಕೊಳ್ಳಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.
‘₹40 ಕೋಟಿ ವೆಚ್ಚದಲ್ಲಿ ಅಂತರ ರಾಷ್ಟ್ರೀಯ ಪುಷ್ಪ ಮಾರುಕಟ್ಟೆ ನಿರ್ಮಿಸ ಲಾಗುತ್ತಿದೆ. ಇದರಲ್ಲಿ 250ರಿಂದ 300 ಮಳಿಗೆಗಳು, ಡಿಜಿಟಲ್ ಹರಾಜು ಸಭಾಂಗಣ, ಶೀತಲ ಗೃಹಗಳು, ವಾಹನ ನಿಲುಗಡೆ ವ್ಯವಸ್ಥೆ, ಪುಷ್ಪ ಬೆಳೆಗಳ ಕೊಯ್ಲೋತ್ತರ ನಿರ್ವಹಣೆ, ಹೂವು ಒಣಗಿಸುವ ತಂತ್ರಜ್ಞಾನ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ’ ಎಂದು ಕೃಷಿ ಮಾರಾಟ ಇಲಾಖೆ ತಿಳಿಸಿದೆ.
‘ತೋಟಗಾರಿಕೆ ಮಹಾ ವಿದ್ಯಾಲಯದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹೂವಿನ ಬೆಳೆ, ಮಾರಾಟ ಮಾಡುವ ಕುರಿತು ಮಾಹಿತಿ ಒದಗಿಸುವ ಕೇಂದ್ರ ಸ್ಥಾಪಿಸಲಾಗುತ್ತದೆ. ಇದು ಸಾರ್ವಜನಿಕರು, ರೈತರು ಹಾಗೂ ಉದ್ಯಮಿಗಳಿಗೆ ಅನುಕೂಲವಾಗಲಿದೆ’ ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ.
‘ನಗರದ ಹೃದಯ ಭಾಗದಲ್ಲಿರುವ ಕೆ.ಆರ್. ಮಾರುಕಟ್ಟೆಯ ಹೂವಿನ ವರ್ತಕರನ್ನು ಜಿಕೆವಿಕೆಯಲ್ಲಿ ನಿರ್ಮಿಸುವ ಪುಷ್ಪ ಮಾರುಕಟ್ಟೆಗೆ ಸ್ಥಳಾಂತರಿಸುವುದು ಬೇಡ. ಇದರಿಂದ ನಮ್ಮ ವ್ಯಾಪಾರ–ವಹಿವಾಟಿಗೆ ಹೊಡೆತ ಬೀಳಲಿದೆ. ಇಲ್ಲಿ ಒಟ್ಟು 136 ಹೂವಿನ ಮಳಿಗೆಗಳಿದ್ದು, ಹೂವಿನ ಹಾರ ಮಾಡುವ 96 ಮಳಿಗೆ ಗಳಿವೆ’ ಎಂದು ಕೆ.ಆರ್. ಮಾರುಕಟ್ಟೆ ಹೂವಿನ ವರ್ತಕರ ಸಂಘದ ಅಧ್ಯಕ್ಷ ಎಸ್. ದಿವಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ’
‘ಎಸ್‌ಜೆಪಿ ರಸ್ತೆಯಲ್ಲಿ ಬೆಳಿಗಿನ ಜಾವ 2ರಿಂದ 7 ಗಂಟೆಯವರೆಗೆ ಕಟ್ ಫ್ಲವರ್ಸ್‌ನ ವ್ಯಾಪಾರ–ವಹಿವಾಟು ನಡೆಸುವ ಹೂವಿನ ವರ್ತಕರನ್ನು ಮಾತ್ರ ನೂತನ ಮಾರುಕಟ್ಟೆಗೆ ಸ್ಥಳಾಂತರಿಸಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗಲಿದೆ. ವರ್ತಕರಿಗೆ ಶಾಶ್ವತ ನೆಲೆ ಕಲ್ಪಿಸಿದಂತಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಜಿಕೆವಿಕೆ ಆವರಣದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಜಮೀನಿನಲ್ಲಿ ಪುಷ್ಪ ಮಾರುಕಟ್ಟೆ ನಿರ್ಮಿಸುವ ಪ್ರಸ್ತಾವ ಇದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ, ಕೃಷಿ ಮಾರಾಟ ಇಲಾಖೆ ಹಾಗೂ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ನಡುವೆ ಒಪ್ಪಂದ ಮಾಡಿಕೊಳ್ಳಬೇಕಿದೆ. ನಂತರ ಅಲ್ಲಿ ಎಷ್ಟು ಮರಗಳನ್ನು ಕಡಿಯಬೇಕು ಎಂಬ ಮಾಹಿತಿ ಸಿಗಲಿದೆ’ ಎಂದು ಕೃಷಿ ಮಾರಾಟ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.