
ಬೆಂಗಳೂರು: ರಾಜ್ಯದ 25 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ನೀತಿ ಖಂಡಿಸಿ, ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ರಾಜ್ಯ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ‘ಸರ್ಕಾರದ ಆದೇಶದ ಪ್ರಕಾರ 800 ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳು ಎಂದು ಗುರುತಿಸಲಾಗಿದೆ. ಅಂದರೆ, ಕರ್ನಾಟಕ ಪಬ್ಲಿಕ್ ಶಾಲೆಯ ಸುತ್ತಮುತ್ತಲಿನ 1ರಿಂದ 5 ಕಿ.ಮೀ. ವ್ಯಾಪ್ತಿಯ, 50ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳಲಿದೆ. ಈ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತದೆ’ ಎಂದು ಆಕ್ರೋಶ ಹೊರಹಾಕಿದರು.
‘ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರಿನ ಕೆಪಿಎಸ್ ಮಾಗ್ನೆಟ್ ಶಾಲೆಗೆ, ಹೊಂಗನೂರಿನ ಆರು ಕಿ.ಮೀ. ವ್ಯಾಪ್ತಿಯ 7 ಪ್ರಾಥಮಿಕ ಶಾಲೆಗಳನ್ನು ವಿದ್ಯಾರ್ಥಿ, ಉಪಾಧ್ಯಾಯರು ಮತ್ತು ಪರಿಕರಗಳ ಸಹಿತ ವಿಲೀನಗೊಳಿಸಲು ಸರ್ಕಾರವು ಆದೇಶ ಹೊರಡಿಸಿದೆ. ಇದರಲ್ಲಿ 110ಕ್ಕೂ ಅಧಿಕ ಸಂಖ್ಯೆಯ ದಾಖಲಾತಿ ಹೊಂದಿರುವ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಅತ್ಯಂತ ಖಂಡನೀಯ’ ಎಂದು ಹೇಳಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಅಭಯಾ ದಿವಾಕರ್, ಚಂದ್ರಕಲಾ, ರಾಜ್ಯ ಕಚೇರಿ ಕಾರ್ಯದರ್ಶಿಗಳಾದ ಮಹಾಂತೇಶ್, ರಾಜ್ಯ ಖಜಾಂಚಿ ಸುಭಾಷ್, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಿನಯ್ ಚಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.