ADVERTISEMENT

ಬಗರ್‌ ಹುಕುಂ: 'ಅನರ್ಹ'ರ ಜಮೀನು ವಶಕ್ಕೆ ಸಿದ್ಧತೆ

ಬಗರ್‌ ಹುಕುಂ ಅರ್ಜಿಗಳ ತ್ವರಿತ ವಿಲೇವಾರಿಗೆ ಗಡುವು

ಸುಬ್ರಹ್ಮಣ್ಯ ವಿ.ಎಸ್‌.
Published 4 ಫೆಬ್ರುವರಿ 2024, 20:46 IST
Last Updated 4 ಫೆಬ್ರುವರಿ 2024, 20:46 IST
<div class="paragraphs"><p>ಜಮೀನು</p></div>

ಜಮೀನು

   

ಬೆಂಗಳೂರು: ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯ ಸಕ್ರಮ (ಬಗರ್‌ ಹುಕುಂ) ಕೋರಿರುವ 9.29 ಲಕ್ಷ ಅರ್ಜಿಗಳ ವಿಲೇವಾರಿಗೆ ಗಡುವು ವಿಧಿಸಿರುವ ಕಂದಾಯ ಇಲಾಖೆ, ‘ಅನರ್ಹ’ ಅರ್ಜಿದಾರರ ವಶದಲ್ಲಿರುವ ಜಮೀನುಗಳನ್ನು ಸ್ವಾಧೀನಕ್ಕೆ ಪಡೆಯಲು ಮುಂದಾಗಿದೆ.

ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವಂತೆ ಕೋರಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ನಮೂನೆ 50, ನಮೂನೆ 53 ಮತ್ತು ನಮೂನೆ 57ರ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಸುತ್ತೋಲೆ ಹೊರಡಿಸಿದ್ದಾರೆ.

ADVERTISEMENT

‘ಪ್ರಾಥಮಿಕ ಹಂತದ ಪರಿಶೀಲನೆ ಪೂರ್ಣಗೊಳಿಸಿ ಅರ್ಜಿಗಳನ್ನು ಬಗರ್‌ ಹುಕುಂ ಸಮಿತಿಯ ಮುಂದೆ ಮಂಡಿಸಬೇಕು. ಸಮಿತಿಯು ಗುರುತಿಸಿದ ಅನರ್ಹ ಅರ್ಜಿಯನ್ನು ಜಿಲ್ಲಾಧಿಕಾರಿಯು ಒಂದು ತಿಂಗಳೊಳಗೆ ತಿರಸ್ಕರಿಸಬೇಕು. ಅಂತಹ ಅರ್ಜಿದಾರರ ವಶದಲ್ಲಿರುವ ಜಮೀನುಗಳನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಿದ್ದಾರೆ.

‘ಅನಧಿಕೃತ ಸಾಗುವಳಿಯನ್ನು ಬಗರ್‌ ಹುಕುಂ ಅಡಿಯಲ್ಲಿ ಸಕ್ರಮಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ತಿರಸ್ಕೃತವಾದರೆ ಅಂತಹ ಜಮೀನುಗಳನ್ನು ಸರ್ಕಾರದ ಸ್ವಾಧೀನಕ್ಕೆ ಪಡೆಯಬೇಕು ಎಂಬ ಅಂಶ ಭೂ ಕಂದಾಯ ಕಾಯ್ದೆಯಲ್ಲೇ ಇದೆ. ಈವರೆಗೆ ಅದನ್ನು ಸಮರ್ಪಕವಾಗಿ ಜಾರಿಗೊಳಿಸಿರಲಿಲ್ಲ. ಈ ಬಾರಿ ಕಾಯ್ದೆ ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ’ ಎಂದು ಕಟಾರಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ಗೋಮಾಳ, ಮೀಸಲು ಅರಣ್ಯ, ದೇವರ ಕಾಡು, ಗುಂಡು ತೋಪು, ಕೆರೆಯಂಗಳ, ಫೂಟ್‌ ಖರಾಬು, ಸ್ಮಶಾನ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಅವಕಾಶವಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಿ, ಆ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆಯುವ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ.

ಅಕ್ರಮ ತಡೆಗೆ ಬಿಗಿ ಕ್ರಮ: ಬಗರ್‌ ಹುಕುಂ ಅರ್ಜಿಗಳ ವಿಲೇವಾರಿಯಲ್ಲಿ ಅಕ್ರಮ ತಡೆಗೆ ಡಿಜಿಟಲ್‌ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಲಾಗಿದೆ. ನಮೂನೆ 50, 53 ಮತ್ತು 57ರಡಿ ಸ್ವೀಕೃತವಾಗಿರುವ ಅರ್ಜಿಗಳ ಪಟ್ಟಿಗಳನ್ನು ಡಿಜಿಟಲೀಕರಣ ಮಾಡಿ, ಹೊಸ ಹೆಸರು ಸೇರಿಸಲಾಗದಂತೆ ‘ಲಾಕ್‌’ ಮಾಡಲಾಗಿದೆ.

ಅನಧಿಕೃತ ಸಾಗುವಳಿದಾರರ ಆಧಾರ್‌ ಇ–ಕೆವೈಸಿ ಮತ್ತು ಸಾಗುವಳಿ ಜಮೀನಿನ ವಿಸ್ತೀರ್ಣ ಹಾಗೂ ಗಡಿಯನ್ನು ಬಗರ್‌‌ ಹುಕುಂ ಮೊಬೈಲ್‌ ಆ್ಯಪ್‌ ಬಳಸಿ ಜಿಯೋ ಫೆನ್ಸಿಂಗ್‌ ಮಾಡುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

‘ಅರ್ಹತೆಗೆ ನಿಗದಿಪಡಿಸಿರುವ ಅವಧಿಯಲ್ಲಿ ಅರ್ಜಿದಾರರು ಸದರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿದ್ದರು ಎಂಬುದನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ರಾಜ್ಯ ದೂರಸಂವೇದಿ ಮತ್ತು ಅನ್ವಯಿಕ ಕೇಂದ್ರದಿಂದ ಪಡೆದ ಉಪಗ್ರಹ ಚಿತ್ರಗಳ ಆಧಾರದಲ್ಲಿ ಪರಿಶೀಲನೆ ನಡೆಯಲಿದೆ. ಇದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ನೆರವನ್ನೂ ಪಡೆಯಲಾಗುವುದು’ ಎಂದು ಕಟಾರಿಯಾ ತಿಳಿಸಿದರು.

ಬಗರ್‌ ಹುಕುಂ ಸಮಿತಿಗಳ ಎಲ್ಲ ಸದಸ್ಯರಿಗೂ ಆಧಾರ್‌ ಇ–ಕೆವೈಸಿ ಜೋಡಿಸಿದ ಬಯೊಮೆಟ್ರಿಕ್‌ ಗುರುತು ನೀಡಲಾಗುತ್ತಿದೆ. ಅದರ ಆಧಾರದಲ್ಲೇ ಡಿಜಿಟಲ್‌ ಸಹಿಯನ್ನೂ ಒದಗಿಸಲಾಗುತ್ತದೆ. ಆಧಾರ್‌ ಇ–ಕೆವೈಸಿ ಮತ್ತು ಡಿಜಿಟಲ್‌ ಸಹಿ ದಾಖಲಿಸಿದ ಬಳಿಕವೇ ಸಭಾ ನಡವಳಿಗಳನ್ನು ದಾಖಲಿಸುವಂತಹ ವ್ಯವಸ್ಥೆಯನ್ನು ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.