ADVERTISEMENT

ವಸತಿಗೆ ₹10,194 ಕೋಟಿ ಅನುದಾನ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 21:48 IST
Last Updated 1 ಜೂನ್ 2020, 21:48 IST
   

ಬೆಂಗಳೂರು: ರಾಜ್ಯದಲ್ಲಿ ನಿರ್ಮಾಣದ ವಿವಿಧ ಹಂತಗಳಲ್ಲಿರುವ 9.74 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ₹10,194 ಕೋಟಿ ಅನುದಾನದ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ನಡೆದ ವಸತಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಈ ಭರವಸೆ ನೀಡಿದರು.

ನಕಲಿ ದಾಖಲೆಗಳನ್ನು ನೀಡಿ ಅಕ್ರಮವಾಗಿ ಮನೆ ಪಡೆದುಕೊಳ್ಳುವ ಪ್ರಕರಣಗಳನ್ನು ಪತ್ತೆ ಮಾಡಿ ಸರ್ಕಾರಕ್ಕೆ ₹8,000 ಕೋಟಿ ಉಳಿತಾಯ ಮಾಡಲಾಗಿದೆ. ಇದು ಶ್ಲಾಘನೀಯ ಕಾರ್ಯ. ವಸತಿ ಯೋಜನೆಗಳ ಪಾರದರ್ಶಕ ಅನುಷ್ಠಾನಕ್ಕೆ ತಾಂತ್ರಿಕ ನ್ಯೂನತೆಗಳನ್ನು ಸರಿಪಡಿಸಿ, ಅನುದಾನ ದುರುಪಯೋಗ ತಡೆಯಲು ಅಭಿವೃದ್ಧಿಪಡಿಸಿರುವ ವಿಜಿಲ್‌ ಆ್ಯಪ್‌ ತಂತ್ರಾಂಶ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಕೊಡಗು ಪುನರ್ವಸತಿ ಯೋಜನೆಯಡಿ 115 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಪೂರ್ಣಗೊಂಡಿರುವ 405 ಮನೆಗಳನ್ನು ಅತಿ ಬೇಗನೆ ಫಲಾನುಭವಿಗಳಿಗೆ ಹಸ್ತಾಂತರಿಸುವಂತೆಯೂ ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ 1.24 ಲಕ್ಷ ನಿವೇಶನಗಳನ್ನು ಬಡವರಿಗೆ ವಿತರಿಸಲು ಗುರುತಿಸಲಾಗಿದೆ. ಇದಕ್ಕಾಗಿ ₹100 ಕೋಟಿ ಲಭ್ಯವಿದೆ. ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಲು ಸುಮಾರು ₹1,000 ಕೋಟಿ ಅಗತ್ಯವಿದೆ ಎಂದು ವಸತಿ ಸಚಿವ ವಿಸೋಮಣ್ಣ ಹೇಳಿದರು.

‘3ನೇ ಅವಧಿಗೂ ಮೋದಿಯೇ ಪ್ರಧಾನಿ’
ಬೆಂಗಳೂರು:
‘ದೇಶವನ್ನು ಕಟ್ಟುವ ಕಾಯಕಕ್ಕೆ ತನ್ನನ್ನು ತಾನೇ ಸಮರ್ಪಿಸಿಕೊಂಡ ‘ಉಕ್ಕಿನ ಮನುಷ್ಯ’ ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಯಲ್ಲೂ ಪ್ರಧಾನಿ ಆಗುತ್ತಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ, ‘ಕಳೆದ ಒಂದು ವರ್ಷದಲ್ಲಿ ಮೋದಿ ಅವರ ಆಡಳಿತದ ಬಗ್ಗೆ ಜನರಲ್ಲಿ ಅಪಾರ ಮೆಚ್ಚುಗೆ ಇದೆ. ಸ್ವಾತಂತ್ರ್ಯ ಕಾಲದಿಂದಲೂ ಬಗೆಹರಿಯದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಈ ಕಾರಣಕ್ಕಾಗಿ ಮೂರನೇ ಅವಧಿಗೂ ಪ್ರಧಾನಿ ಆಗಬೇಕು ಎಂಬುದು ಜನರ ಬಯಕೆ’ ಎಂದರು.

‘ಎರಡನೇ ಅವಧಿಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕೆಲಸ ಮಾಡಿದ್ದಾರೆ. ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ತ್ರಿವಳಿ ತಲಾಖ್ ರದ್ದು, ರಾಮಮಂದಿರ ಸಮಸ್ಯೆ ಇತ್ಯರ್ಥ, ಪೌರತ್ವ ಕಾಯ್ದೆಗೆ ತಿದ್ದುಪಡಿ, ಒಂದು ದೇಶ ಒಂದು ಪಡಿತರ ಚೀಟಿ, ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ಪ್ರಮುಖವಾದವು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.