
ಬೆಂಗಳೂರು: ರಾಜಧಾನಿ ಬೆಂಗಳೂರಿನ ಆಡಳಿತವನ್ನು ನಾಗರಿಕರ ಬಾಗಿಲಿಗೆ ಕೊಂಡೊಯ್ದು, ಸ್ಥಳೀಯ ಅಭಿವೃದ್ಧಿಗೆ ಒತ್ತು ನೀಡಲೆಂದೇ ರಚನೆಯಾಗಿರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಂದ ರಾಜ್ಯ ಬಜೆಟ್ ಮೇಲೆ ಭಾರೀ ನಿರೀಕ್ಷೆ ಇದೆ.
ಐದು ನಗರ ಪಾಲಿಕೆಗಳು ರಚನೆಯಾಗಿ ಐದು ತಿಂಗಳಾಗಿದ್ದು, ರಾಜ್ಯದ ಬಜೆಟ್ ಮಂಡನೆ ನಂತರ ಮಾರ್ಚ್ ಎರಡನೇ ವಾರದಲ್ಲಿ ಮೊದಲ ಆಯವ್ಯಯ ಮಂಡಿಸಲು ಈಗಾಗಲೇ ಸಿದ್ಧತೆ ನಡೆಸಿವೆ. ಬೃಹತ್ ಯೋಜನೆಗಳಿಗೆ ನಗರ ಪಾಲಿಕೆಯೊಳಗೆ ಹೆಚ್ಚಿನ ಅವಕಾಶವಿಲ್ಲ. ಹೀಗಾಗಿ, ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ, ಶೌಚಾಲಯ, ಕೆರೆ, ತೋಟಗಾರಿಕೆ, ಸೌಂದರ್ಯೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ.
ನಗರ ಪಾಲಿಕೆಗಳು ಸಂಪನ್ಮೂಲ ಕ್ರೋಡೀಕರಣದಲ್ಲಿ ಇನ್ನೂ ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ. ಪ್ರತಿಯೊಂದು ವಿಭಾಗದ ಹಣವೂ ಜಿಬಿಎ ಖಾತೆಗೇ ಹೋಗುತ್ತಿದ್ದು, ಅಲ್ಲಿಂದ ಹಣ ವರ್ಗಾವಣೆಯಾಗಬೇಕಿದೆ. ಹೀಗಾಗಿ, ಆರ್ಥಿಕ ಸ್ವಾವಲಂಬನೆ ದೂರದ ಮಾತಾಗಿದೆ.
ಇಷ್ಟಾದರೂ, ಜಾಹೀರಾತು ತೆರಿಗೆ, ವಾಹನ ನಿಲುಗಡೆ ಶುಲ್ಕ, ಉದ್ದಿಮೆ ಪರವಾನಗಿ ಸೇರಿದಂತೆ ಎಲ್ಲೆಲ್ಲಿ ಸಂಪನ್ಮೂಲವನ್ನು ಕ್ರೋಡೀಕರಿಸಲು ಸಾಧ್ಯವೋ ಅದನ್ನೆಲ್ಲ ನಗರ ಪಾಲಿಕೆ ಆಯುಕ್ತರು ಲೆಕ್ಕಾಚಾರ ಹಾಕಿದ್ದಾರೆ. ಆದರೆ, ಇದೆಲ್ಲದ್ದರಿಂದ ನಾಗರಿಕರ ನಿರೀಕ್ಷೆಯ ಗುಣಮಟ್ಟದ ಮೂಲಸೌಕರ್ಯವನ್ನು ನೀಡಲು ಸಾಧ್ಯವಿಲ್ಲ ಎಂಬುದನ್ನೂ ನಗರ ಪಾಲಿಕೆ ಅಧಿಕಾರಿಗಳು ಮನಗಂಡಿದ್ದಾರೆ.
ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು ಮಂಡಿಸಲಿರುವ ಬಜೆಟ್ ಮೇಲೆ ಭಾರೀ ನಿರೀಕ್ಷೆ ಹೊಂದಿರುವ ನಗರ ಪಾಲಿಕೆಗಳು, ರಾಜ್ಯದ ಐದನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಅವರೊಂದಿಗೆ ನಡೆಸಿದ ಸಭೆಯಲ್ಲಿ ತಮ್ಮದೇ ಆದ ಬೇಡಿಕೆಗಳನ್ನು ಇರಿಸಿವೆ. ರಸ್ತೆ, ಚರಂಡಿ, ಪಾದಚಾರಿ ಮಾರ್ಗ, ಶೌಚಾಲಯ ಸೇರಿದಂತೆ ಮೂಲಸೌಕರ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಅಗತ್ಯವಿದ್ದು, ಅನುದಾನ ಒದಗಿಸುವಂತೆ ಕೋರಲಾಗಿದೆ.
2007ರಲ್ಲಿ ಬಿಬಿಎಂಪಿ ರಚನೆ ಆದಾಗಿನಿಂದಲೂ ನಗರವು ಮೂಲಸೌಕರ್ಯದ ಕೊರತೆಯಲ್ಲೇ ನಲುಗುತ್ತಿದೆ. ಒಳಭಾಗದ ಪ್ರದೇಶಗಳಲ್ಲದೆ ಹೊಸದಾಗಿ ಸೇರಿಕೊಂಡ 110 ಹಳ್ಳಿಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಇಂದಿಗೂ ಸರಿಯಾದ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲ. ಇವುಗಳನ್ನು ಕಲ್ಪಿಸಲು ಪಾಲಿಕೆಗಳಿಗೆ, ಸರ್ಕಾರದಿಂದ ಹೆಚ್ಚಿನ ಅನುದಾನದ ಅಗತ್ಯವಿದೆ.
ಮಳೆಗಾಲದಲ್ಲಿ ತಲೆದೋರುವ ಸಮಸ್ಯೆಗಳ ನಿವಾರಣೆಗೆ ನಗರ ಪಾಲಿಕೆಗಳು ಇನ್ನೂ ಸಿದ್ಧಗೊಂಡಿಲ್ಲ. ಬೇಸಿಗೆಯಲ್ಲಿ ಮಳೆಯಾದರೆ ನಗರದ ಹಲವು ರಸ್ತೆಗಳಲ್ಲಿ ಪ್ರವಾಹದ ಸ್ಥಿತಿ ಉಂಟಾಗುವುದರಲ್ಲಿ ಸಂದೇಹವಿಲ್ಲ. ಈ ಬಗ್ಗೆ ಎಲ್ಲ ಮಾಹಿತಿಯನ್ನೂ ಹೊಂದಿರುವ ನಗರ ಪಾಲಿಕೆಗಳು, ಪರಿಹಾರ ಕಾರ್ಯಾಚರಣೆಗೆ ಮುಂದಾಗಿಲ್ಲ. ಬಜೆಟ್‌ನಲ್ಲಿ ಹಣವಿರಿಸಿ, ರಾಜ್ಯ ಸರ್ಕಾರದಿಂದ ಬರುವ ಅನುದಾನದಲ್ಲಿ ಕಾಮಗಾರಿ ಆರಂಭಿಸಲು ಯೋಚಿಸುತ್ತಿವೆ.
ನಗರದ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊದಲು, ‘₹1 ಲಕ್ಷ ಕೋಟಿ ವೆಚ್ಚದ ಬೃಹತ್ ಯೋಜನೆಗಳು ನಗರದಲ್ಲಿ ಅನುಷ್ಠಾನವಾಗಲಿವೆ’ ಎನ್ನುತ್ತಿದ್ದರು. ಇದೀಗ ಆ ವೆಚ್ಚ ₹1.5 ಲಕ್ಷ ಕೋಟಿಯನ್ನು ಮೀರಿದೆ. ಸುರಂಗ ರಸ್ತೆ, ಮೇಲ್ಸೇತುವೆ, ಕಾರಿಡಾರ್‌ಗಳು, ಸ್ಕೈಡೆಕ್ ಇದರಲ್ಲಿ ಸೇರಿವೆ. ಆದರೆ, ಎರಡು ವರ್ಷವಾದರೂ ಒಂದು ಯೋಜನೆಯೂ ಆರಂಭವಾಗಿಲ್ಲ. ಟೆಂಡರ್, ಡಿಪಿಆರ್ ಹಂತದಲ್ಲೇ ಎಲ್ಲವೂ ನಲುಗುತ್ತಿವೆ. ಇವುಗಳಿಗೆ ಸರ್ಕಾರ ನೇರವಾಗಿ ಹಣ ನೀಡುತ್ತದೆಯೇ ಅಥವಾ ನಗರ ಪಾಲಿಕೆಗಳಿಂದ ಪಾಲು ಬರುತ್ತದೆಯೇ ಎಂಬ ಬಗ್ಗೆಯೂ ಸ್ಪಷ್ಟನೆ ಸಿಕ್ಕಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು ₹2,200 ಕೋಟಿಯನ್ನು ವಿಶೇಷ ಅನುದಾನವಾಗಿ ನೀಡಿದ್ದರಿಂದ ನಗರದ ಹಲವು ಭಾಗಗಳಲ್ಲಿ ರಸ್ತೆಗಳು ಡಾಂಬರು ಕಾಣುತ್ತಿವೆ. ಆದರೆ, ಇವು ಇನ್ನೂ ಆರಂಭದ ಹಂತದಲ್ಲೇ ಇವೆ. ಬ್ಲ್ಯಾಕ್–ವೈಟ್ ಟಾಪಿಂಗ್, ಸಮಗ್ರ ಅಭಿವೃದ್ಧಿ ಯೋಜನೆಯಲ್ಲಿ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳು ಮಾತ್ರ ಅಭಿವೃದ್ಧಿಯಾಗುತ್ತಿದ್ದು, ವಾರ್ಡ್ ರಸ್ತೆಗಳು ಗುಂಡಿಯಲ್ಲೇ ನಲುಗುತ್ತಿವೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಂತೆ (ಜಿಬಿಜಿಎ) ರಚನೆಯಾಗಿರುವ ಜಿಬಿಎ ಹಾಗೂ ಐದು ನಗರ ಪಾಲಿಕೆಗಳ ನಡುವಿನ ಹಣಕಾಸು ವಿಭಜನೆಗೆ ಐದು ತಿಂಗಳಾದರೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆಸ್ತಿ ತೆರಿಗೆ ಸೇರಿದಂತೆ ಶುಲ್ಕ ಸಂಗ್ರಹ ಈಗಲೂ ಜಿಬಿಎ ಖಾತೆಗೆ ಹೋಗುತ್ತಿದೆ. ಅಲ್ಲಿಂದ ಆಯಾ ನಗರ ಪಾಲಿಕೆಗಳಿಗೆ ಹಣ ವರ್ಗಾವಣೆ ಆಗುತ್ತಿದೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸುವ ಅನುದಾನದಲ್ಲೂ ಅದೇ ರೀತಿಯಾಗುತ್ತದೆಯೇ ಎಂಬ ಪ್ರಶ್ನೆಗೆ ಜಿಬಿಎ, ನಗರ ಪಾಲಿಕೆಯ ಹಿರಿಯ ಅಧಿಕಾರಿಗಳ ಬಳಿ ಉತ್ತರವಿಲ್ಲ.
ಬಿಬಿಎಂಪಿ ಇದ್ದಾಗ, ವಿಶೇಷ ಮೂಲಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆಯಡಿ ಪ್ರತಿ ವರ್ಷ ₹3,000 ಕೋಟಿಯನ್ನು ರಾಜ್ಯ ಸರ್ಕಾರ ಅನುದಾನವಾಗಿ ನೀಡುತ್ತಿತ್ತು. ಪ್ರತಿ ವರ್ಷ ನಾಲ್ಕು ಕಂತುಗಳಲ್ಲಿ ಈ ಅನುದಾನ ಪಾವತಿಯಾಗುತ್ತಿತ್ತು. ನಗರ ಪಾಲಿಕೆಗಳು ರಚನೆಯಾದ ನಂತರವೂ ಪ್ರಸಕ್ತ ಆರ್ಥಿಕ ವರ್ಷದ ಬಾಬ್ತಿನಲ್ಲಿ ಈ ಅನುದಾನದ ಮೂರನೇ ಕಂತನ್ನು ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಖಾತೆಗೆ ವರ್ಗಾಯಿಸಲಾಗಿದೆ. ಇನ್ನು ಕಳೆದ ಬಜೆಟ್‌ನಲ್ಲಿ ಘೋಷಿಸಿರುವ ಹೆಚ್ಚುವರಿ ₹4,000 ಕೋಟಿ ಅನುದಾನ, ಬೃಹತ್ ಯೋಜನೆಗಳಿಗೆ ಎಂದೇ ಹೇಳಲಾಗಿದೆ. ಅದರಲ್ಲಿ ಒಂದಿಷ್ಟು ಹಣ ಈವರೆಗೆ ಬಿಡುಗಡೆ ಆಗಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು ಬಜೆಟ್ ಮಂಡಿಸಲಿದ್ದಾರೆ. ಮೆಟ್ರೊ, ಸುರಂಗ ರಸ್ತೆ, ಮೇಲ್ಸೇತುವೆಗಳ ನಿರ್ಮಾಣ, ರಸ್ತೆ, ಶೌಚಾಲಯ, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಸೇರಿದಂತೆ ರಾಜಧಾನಿಯಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಅನುದಾನದ ಅಗತ್ಯವಿದೆ.
ಜೀವನಮಟ್ಟವನ್ನು ಸುಗಮಗೊಳಿಸಲು ಸರ್ಕಾರ ಬಜೆಟ್‌ನಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕು. ತಮ್ಮ ನಿರೀಕ್ಷೆಗಳು ಏನು ಎಂಬುದನ್ನು ಜನರು ಹಂಚಿಕೊಳ್ಳಬಹುದು. 50 ಪದಗಳಿಗೆ ಮೀರದಂತೆ ಬರೆದು, ಭಾವಚಿತ್ರ ಸಮೇತ ಕಳುಹಿಸಬೇಕು.
ವಾಟ್ಸ್‌ಆ್ಯಪ್ ಸಂಖ್ಯೆ: 9606038256
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.