
ಜಿಬಿಎ
ಬೆಂಗಳೂರು: ರಸ್ತೆಯಲ್ಲಿ ತ್ಯಾಜ್ಯ ಹಾಕುವವರ ಮನೆ ಮುಂದೆ ಕಸ ಸುರಿದು ಅರಿವು ಮೂಡಿಸುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಕಿರಿಯ ಆರೋಗ್ಯಾಧಿಕಾರಿಗಳಿಗೆ (ಜೆಎಚ್‌ಐ) ಎಂಟು ತಿಂಗಳಿಂದ ವೇತನ ಪಾವತಿಸದೆ ಸಂಕಷ್ಟಕ್ಕೆ ದೂಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ವ್ಯಾಪ್ತಿಗೆ ಬರುವ ಜೆಎಚ್‌ಐಗಳನ್ನು ಘನತ್ಯಾಜ್ಯ ಪರಿವೀಕ್ಷಕರು (ಎಸ್‌ಡಬ್ಲ್ಯಐ) ಎಂದೂ ಕರೆಯಲಾಗುತ್ತದೆ. ಬಿಬಿಎಂಪಿ– ಜಿಬಿಎ ಎಂಬ ಗೊಂದಲದಲ್ಲಿರುವ ಅಧಿಕಾರಿಗಳ ನಿರ್ಲಕ್ಷ್ಯದಿಂದ ತ್ಯಾಜ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಜೆಎಚ್‌ಐಗಳಿಗೆ 2025ರ ಫೆಬ್ರುವರಿಯಿಂದ ವೇತನ ಪಾವತಿಸಿಲ್ಲ.
ಜೆಎಚ್‌ಐಗಳನ್ನು ಗುತ್ತಿಗೆ ಆಧಾರದಲ್ಲಿ ಏಜೆನ್ಸಿಗಳ ಮೂಲಕ ಬಿಬಿಎಂಪಿ ಪಡೆದುಕೊಳ್ಳುತ್ತಿತ್ತು. ಹೊಸ ಏಜೆನ್ಸಿಯನ್ನು ನೇಮಕ ಮಾಡುವ ಸಂದರ್ಭದಲ್ಲಿ ಉಂಟಾಗಿರುವ ಗೊಂದಲವನ್ನು ಎಂಟು ತಿಂಗಳಾದರೂ ಪರಿಹರಿಸಲು ಜಿಬಿಎ ಅಧಿಕಾರಿಗಳು ಮುಂದಾಗಿಲ್ಲ.
‘ಬಿಬಿಎಂಪಿ ಇದ್ದಾಗ ಏಜೆನ್ಸಿ ಮೂಲಕ ಕಾರ್ಯನಿರ್ವಹಿಸಲಾಗುತ್ತಿತ್ತು. ನಂತರ ಹೊಸ ಏಜೆನ್ಸಿಗೆ ಅವಕಾಶ ನೀಡಲಾಯಿತು. ಕೆಲವು ಕಡೆ ವಾರ್ಡ್‌ಗೊಬ್ಬರು ಜೆಎಚ್‌ಐ ಸಾಕು ಎಂಬ ಆದೇಶ ಹೊರಬಿತ್ತು. ಅದಾದ ಮೇಲೆ ಅದನ್ನೂ ಪರಿಷ್ಕರಿಸಿ ಹಳೆಯ ಸಂಖ್ಯೆಯ ಜೆಎಚ್‌ಐಗಳನ್ನೇ ಉಳಿಸಿಕೊಳ್ಳಲು ನಿರ್ಧರಿಸಲಾಯಿತು. ಆದರೆ, ಇದಕ್ಕಾಗಿ ಕಡತ ಪ್ರಕ್ರಿಯೆಗಳು ಪೂರ್ಣಗೊಳ್ಳದೆ ವೇತನ ದೊರೆತಿಲ್ಲ. ಇದರ ಬಗ್ಗೆ ಆರು ತಿಂಗಳಿಂದ ಹೋರಾಟ ಮಾಡುತ್ತಿದ್ದರೂ, ಪ್ರಯೋಜನವಾಗಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಜೆಎಚ್‌ಐಗಳು ಹೇಳಿದರು.
‘ಹಲವು ವರ್ಷಗಳಿಂದ ಏಜೆನ್ಸಿಗಳ ಮೂಲಕವೇ ಕೆಲಸ ಮಾಡುತ್ತಿದ್ದೇವೆ. ಅವರಿಂದಲೇ ವೇತನ ಪಾವತಿಯಾಗುತ್ತಿದೆ. ಆದರೆ, ಫೆಬ್ರುವರಿಯಿಂದ ಸಮಸ್ಯೆ ಪ್ರಾರಂಭವಾಗಿದೆ. ಏಜೆನ್ಸಿ ಬದಲಾವಣೆ ಮಾಡಿದರು. ಬಿಬಿಎಂಪಿ ವಲಯದಿಂದ ಅವರಿಗೆ ಹಣ ಪಾವತಿಸಲಿಲ್ಲ. ಪ್ರಕ್ರಿಯೆ ನಡೆಯುತ್ತಿದೆ ಎಂದು ಕಾಲ ತಳ್ಳಿದರು. ನಂತರ, ಜಿಬಿಎ ರಚನೆಯಾಗಿ, ನಗರ ಪಾಲಿಕೆಗಳಾದವು. ಅವುಗಳಿಗೆ ಕಡತಗಳನ್ನು ವಿಲೇವಾರಿ ಮಾಡಿಲ್ಲ. ಹೀಗಾಗಿ, ನಗರ ಪಾಲಿಕೆಗಳಿಂದಲೂ ವೇತನ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ನಗರ ಪಾಲಿಕೆ ಆಯುಕ್ತರು, ಜಿಬಿಎ ಹಿರಿಯ ಅಧಿಕಾರಿಗಳು ಮನಸ್ಸು ಮಾಡಿದರೆ ಒಂದು ದಿನದಲ್ಲಿ ವೇತನ ಪಾವತಿ ಮಾಡಬಹುದು’ ಎಂದರು.
‘ಎಂಟು ತಿಂಗಳಿಂದ ಜೆಎಚ್‌ಐಗಳಿಗೆ ವೇತನವಾಗಿಲ್ಲ. ತ್ಯಾಜ್ಯ ನಿರ್ವಹಣೆಯಲ್ಲಿ ಆಟೊ, ಪೌರಕಾರ್ಮಿಕರು ಸೇರಿದಂತೆ ಎಲ್ಲವನ್ನೂ ಜವಾಬ್ದಾರಿಯಿಂದ ಅವರೇ ನಿಭಾಯಿಸುತ್ತಿದ್ದಾರೆ. ವೇತನವಿಲ್ಲದೆ ಅವರಿಗೆ ಒತ್ತಡ ಹೆಚ್ಚಾಗಿದ್ದು, ನಾವು ಕೆಲಸವನ್ನೂ ಹೇಳದ ಸ್ಥಿತಿಯಲ್ಲಿದ್ದೇವೆ. ನಗರ ಪಾಲಿಕೆಗಳ ಆಯುಕ್ತರು ಸೇರಿದಂತೆ ಎಲ್ಲರಿಗೂ ವೇತನ ಬಿಡುಗಡೆ ಮಾಡಲು ಶಿಫಾರಸು ಮಾಡಿದ್ದೇವೆ’ ಎಂದು ನಗರ ಪಾಲಿಕೆಗಳ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ತಿಳಿಸಿದರು.
‘ಜೆಎಚ್‌ಐಗಳಿಗೆ ಆಯಾ ನಗರ ಪಾಲಿಕೆಗಳಿಂದ ವೇತನ ನೀಡಬೇಕು. ಈ ಬಗ್ಗೆ ಅಗತ್ಯ ಸುತ್ತೋಲೆಯನ್ನು ಹೊರಡಿಸಲಾಗಿದೆ. ನಗರ ಪಾಲಿಕೆಗಳ ಆಯುಕ್ತರು ಕ್ರಮ ಕೈಗೊಳ್ಳಬೇಕು. ಅವರೊಂದಿಗೆ ಮಾತನಾಡಿ, ವೇತನ ಬಿಡುಗಡೆ ಮಾಡಿಸಲಾಗುತ್ತದೆ’ ಎಂದು ಜಿಬಿಎಯ ಆರೋಗ್ಯ–ನೈರ್ಮಲ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಫೆಬ್ರುವರಿ, ಮಾರ್ಚ್, ಏಪ್ರಿಲ್ ವೇತನವನ್ನು ಬಿಬಿಎಂಪಿ ವಲಯ ಮಟ್ಟದಲ್ಲಿ ಪಾವತಿಸಬೇಕಿತ್ತು. ಏಜೆನ್ಸಿಗಳು ಬಿಲ್ ಸಲ್ಲಿಸದ ಕಾರಣ ವೇತನ ಬಿಡುಗಡೆ ಆಗಿಲ್ಲ. ನಂತರ, ವಲಯ ಮಟ್ಟದಲ್ಲಿ ಏಜೆನ್ಸಿಗಳನ್ನು ಗುರುತಿಸಲಾಗಿತ್ತು. ಅವರನ್ನು ಹೊಸ ನಗರ ಪಾಲಿಕೆಗಳಿಗೆ ಸೇರಿಸಿಕೊಳ್ಳಲು ಸೂಚಿಸಲಾಗಿತ್ತು. ಈ ಪ್ರಕ್ರಿಯೆ ಮುಗಿಯದ ಕಾರಣ ವೇತನ ಪಾವತಿಯಾಗಿಲ್ಲ’ ಎಂದು ಹೇಳಿದರು.

ವೇತನ ಬಿಡುಗಡೆಗೆ ನಗರ ಪಾಲಿಕೆಗಳ ಆಯುಕ್ತರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು.-ಸುರಳ್ಕರ್ ವಿಕಾಸ್ ಕಿಶೋರ್, ಜಿಬಿಎಯ ಆರೋಗ್ಯ–ನೈರ್ಮಲ್ಯ ವಿಭಾಗದ ವಿಶೇಷ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.