ADVERTISEMENT

ಮಲ್ಲೇಶ್ವರ: ನ.8ರಿಂದ ಕಾಡುಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಕಡಲೆಕಾಯಿ ಪರಿಷೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 14:31 IST
Last Updated 4 ನವೆಂಬರ್ 2025, 14:31 IST
   

ಬೆಂಗಳೂರು: ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ಕಾಡು ಮಲ್ಲೇಶ್ವರ ಬಳಗದಿಂದ ನವೆಂಬರ್ 8ರಿಂದ 10ರವರೆಗೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಒಂಬತ್ತನೇ ವರ್ಷದ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ, ‘ನಗರದ ಜನರಿಗೆ ಗ್ರಾಮೀಣ ಸಂಸ್ಕೃತಿ, ಜೀವನ ಪದ್ಧತಿಯನ್ನು ಪರಿಚಯಿಸಲು ಕಾರ್ತಿಕ ಮಾಸದಲ್ಲಿ ಮೂರು ದಿನ ಕಡಲೆಕಾಯಿ ಪರಿಷೆ ಹಮ್ಮಿಕೊಳ್ಳಲಾಗಿದೆ. ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದ ರೈತರು ಕಡಲೆಕಾಯಿ ತಂದು ಮಾರಾಟ ಮಾಡಲಿದ್ದಾರೆ. 400ಕ್ಕೂ ಹೆಚ್ಚು ಮಳಿಗೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ನ. 8ರಂದು ಸಂಜೆ 5ಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿಲಿದ್ದಾರೆ. ಸಂಜೆ 6.30ಕ್ಕೆ ‘ಪುಟ್ಟಣ್ಣ ಕಣಗಾಲ್’ ನೆನಪಿನ ಹಾಡುಗಳನ್ನು ಸವಿತಾ ಗಣೇಶ್ ಪ್ರಸಾದ್ ಪ್ರಸ್ತುತಪಡಿಸಲಿದ್ದು, ಶಾಸಕ ವಿಜಯಾನಂದ ಕಾಶಪ್ಪನವರ, ವೀರಕಪುತ್ರ ಶ್ರೀನಿವಾಸ್ ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

‘ನ. 9ರಂದು ಬೆಳಿಗ್ಗೆ 11ಕ್ಕೆ ಮಧುಮನೋಹರನ್, ಕಾರ್ತಿಕ್ ಪಾಂಡವಪುರ ತಂಡದಿಂದ ಭಾವ ಸಂಗೀತ ಸಂಗಮ’ ಸಂಗೀತ ಕಛೇರಿ ನಡೆಯಲಿದೆ. ಸಂಜೆ 5ಕ್ಕೆ ಹಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿಯನ್ನು ಗರ್ತಿಕೆರೆ ರಾಘಣ್ಣ ಅವರಿಗೆ ಪ್ರದಾನ ಮಾಡಲಾಗುತ್ತದೆ. ಸಂಜೆ 6ಕ್ಕೆ ಡಾ. ರಾಜ್‌ಕುಮಾರ್ ಮಾಧುರ್ಯದ ನೆನಪಿನಲ್ಲಿ ಸಂಗೀತ ಕಛೇರಿ ನಡೆಯಲಿದೆ ಎಂದು ತಿಳಿಸಿದರು. 

ನ.10ರಂದು ಸಂಜೆ 5ಕ್ಕೆ ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಕಡಲೆಕಾಯಿ ಪರಿಷೆ ಸಂಪನ್ನಗೊಳ್ಳಲಿದ್ದು, ಸಂಜೆ 6.30ಕ್ಕೆ ಹುಣ್ಣಿಮೆ ಹಾಡು 255ರ ಕಾರ್ಯಕ್ರಮದಲ್ಲಿ ಕಾರ್ತಿಕ್ ಮಣಿ ಮತ್ತು ಜರ್ಮನಿಯ ಮ್ಯಾಗ್ನಸ್ ಡವ್‌ನರ್‌ ತಂಡದಿಂದ ಜರ್ಮನಿ ಕರ್ನಾಟಕ ಸಂಗೀತ ತಾಳವಾದ್ಯ ಜರುಗಲಿದೆ ಎಂದರು.