ADVERTISEMENT

ಆರೋಗ್ಯ ಇಲಾಖೆ ಸುತ್ತೋಲೆ, ಕೈಪಿಡಿ ಕನ್ನಡದಲ್ಲಿರಲಿ: ಟಿ.ಎಸ್‌.ನಾಗಾಭರಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮೇ 2021, 19:50 IST
Last Updated 22 ಮೇ 2021, 19:50 IST
ಟಿ.ಎಸ್‌.ನಾಗಾಭರಣ
ಟಿ.ಎಸ್‌.ನಾಗಾಭರಣ   

ಬೆಂಗಳೂರು: ‘ಆರೋಗ್ಯ ಇಲಾಖೆ ಹೊರಡಿಸುವ ಸುತ್ತೋಲೆ ಹಾಗೂ ಕೈಪಿಡಿಗಳು ಕನ್ನಡದಲ್ಲಿರಬೇಕು. ಇವು ಇಂಗ್ಲಿಷ್‌ನಲ್ಲಿರುವುದರಿಂದ ಶೇ70ರಷ್ಟು ಜನರಿಗೆ ತಲುಪುತ್ತಿಲ್ಲ. ಇದು ವಿಷಾದದ ಸಂಗತಿ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಬೇಸರ ವ್ಯಕ್ತಪಡಿಸಿದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಶನಿವಾರ ಆನ್‌ಲೈನ್‌ ಮೂಲಕ ಹಮ್ಮಿಕೊಂಡಿದ್ದ ‘ಕನ್ನಡ ವೈದ್ಯಕೀಯ ಸಾಹಿತ್ಯ ಸಮ್ಮೇಳನ’ದಲ್ಲಿ ಅವರು ‘ಆರೋಗ್ಯ ವಿಜ್ಞಾನ’ ತ್ರೈಮಾಸಿಕ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

‘ಕೋವಿಡ್‌ ಸಂದಿಗ್ಧ ಪರಿಸ್ಥಿತಿಯಲ್ಲಿ
ಆರೋಗ್ಯ ಇಲಾಖೆ ಹೊರಡಿಸುವ ಮಾರ್ಗಸೂಚಿಗಳು ಕನ್ನಡದಲ್ಲಿರಬೇಕು. ಹಾಗಾದಾಗ ಮಾತ್ರ ಅವು ಗ್ರಾಮೀಣ ಭಾಗದ ಜನರಿಗೂ ತಲುಪುತ್ತವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಗಮನಹರಿಸಬೇಕು. ಸಹಾಯಕ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡದ ಬಳಕೆ ಜಾರಿಗೊಳಿಸಬೇಕು. ಇದರಿಂದ ಕನ್ನಡದ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಒತ್ತಾಯಿಸಿದರು.

ADVERTISEMENT

‘ಭಾಷೆ ಎಲ್ಲವನ್ನೂ ಸಂಗ್ರಹಿಸಿಕೊಳ್ಳುವ ವಿಜ್ಞಾನ. ಪಾರಂಪರಿಕ ಜ್ಞಾನದ ಜೊತೆಯಲ್ಲಿ ವಿಜ್ಞಾನ ಮೇಳೈಸಿದಾಗ ಮಾತ್ರ ಬದುಕು ಸುಗಮವಾಗುತ್ತದೆ’ ಎಂದು ತಿಳಿಸಿದರು.

ಕುಲಪತಿ ಎಸ್‌. ಸಚ್ಚಿದಾನಂದ ‘ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ‘ಕನ್ನಡ ಕಲಿ’ ಪುಸ್ತಕ ಹೊರತಂದಿದ್ದೇವೆ’ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಪಿ.ಎಸ್‌.ಶಂಕರ್‌ ‘ವೈದ್ಯಕೀಯ ಬರವಣಿಗೆ ಸಮೃದ್ಧವಾಗಿದ್ದರೂ ಅದಕ್ಕೆ ಸಾಹಿತ್ಯಿಕ ಮನ್ನಣೆ ಸಿಕ್ಕಿಲ್ಲ. ನಮ್ಮ ಬರವಣಿಗೆ ಸೃಜನಾತ್ಮಕವಲ್ಲ ಎಂಬ ಅಭಿಪ್ರಾಯವಿದೆ. ವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪಡೆದವರು ನಗರ ಹಾಗೂ ಹಳ್ಳಿಗಾಡಿನ ಜನರ ಜೊತೆ ಬೆರೆತು ಕೆಲಸ ಮಾಡಬೇಕಿದೆ. ರೋಗಿಗಳನ್ನು ಅವರ ಮಾತೃಭಾಷೆಯಲ್ಲೇ ವಿಚಾರಿಸಬೇಕಾಗುತ್ತದೆ. ಹೀಗಾಗಿ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲೂ ಕನ್ನಡದ ಮೂಲಕ ಸಾಮಾನ್ಯ ರೋಗಗಳ ಗುಣಲಕ್ಷಣ, ಚಿಕಿತ್ಸಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ವಾರದಲ್ಲಿ ಎರಡು ದಿನಗಳಲ್ಲಿ ಕನ್ನಡ ತರಗತಿಗಳನ್ನು ಆಯೋಜಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.