ಬೆಂಗಳೂರು: ಈ ವರ್ಷದ ಏಪ್ರಿಲ್–ಮೇ ತಿಂಗಳಲ್ಲಿ ಬಿರುಗಾಳಿ ಸಹಿತ ಸುರಿದ ಪೂರ್ವ ಮುಂಗಾರು ಮಳೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು ಮೂರುವರೆ ಸಾವಿರದಷ್ಟು ವಿದ್ಯುತ್ ಕಂಬಗಳು ಧರೆಗುರುಳಿದ್ದು, 350ಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ಅಂದಾಜು ₹7.08 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಏಪ್ರಿಲ್ ಮತ್ತು ಮೇ 18ರವರೆಗೆ 3,461 ವಿದ್ಯುತ್ ಕಂಬಗಳು ಧರೆಗುರುಳಿವೆ. 380 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ಪರಿಕರಗಳಿಗೆ ₹6.08 ಕೋಟಿ ಹಾಗೂ ಕಾರ್ಮಿಕರಿಗೆ ₹98.78 ಲಕ್ಷ ವೆಚ್ಚವಾಗುವುದಾಗಿ ಅಂದಾಜಿಸಲಾಗಿದೆ.
ಮೇ ತಿಂಗಳಲ್ಲಿ ಹೆಚ್ಚು: ಏಪ್ರಿಲ್ ತಿಂಗಳಲ್ಲಿ 1,880 ವಿದ್ಯುತ್ ಕಂಬಗಳಿಗೆ, 150 ಪರಿವರ್ತಕಗಳಿಗೆ ಹಾನಿಯಾಗಿದೆ. ಮೇ ತಿಂಗಳ ಮಧ್ಯಭಾಗದ ವೇಳೆಗೆ ಎರಡೂ ಪರಿಕರಗಳ ಹಾನಿ ಪ್ರಮಾಣ ಕ್ರಮವಾಗಿ 1,581 ಹಾಗೂ 229ರಷ್ಟಾಗಿದೆ. ಎರಡೇ ತಿಂಗಳಲ್ಲಿ ₹2.26 ಕೋಟಿ ನಷ್ಟ ಸಂಭವಿಸಿದೆ.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು 1,120 ವಿದ್ಯುತ್ ಕಂಬಗಳು ಧರೆಗರುಳಿವೆ. ಹಾಗೆಯೇ, ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು 183 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ಉಳಿದಂತೆ ದಾವಣಗೆರೆ ಜಿಲ್ಲೆಯಲ್ಲಿ 734, ರಾಮನಗರ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ತಲಾ 400ಕ್ಕೂ ಹೆಚ್ಚು ಕಂಬಗಳಿಗೆ ಹಾನಿಯಾಗಿದೆ.
ಈ ವರ್ಷ ಫೆಬ್ರವರಿ ತಿಂಗಳ ಅಂತ್ಯದಿಂದಲೇ ಮುಂಗಾರು ಪೂರ್ವ ಮಳೆ ಆರಂಭವಾಯಿತು. ಮಾರ್ಚ್ ಮಧ್ಯಭಾಗದ ವೇಳೆ ತುಸು ಬಿರುಸಾಯಿತು. ಕಳೆದ ವರ್ಷ ಏಪ್ರಿಲ್ ಕೊನೆಯ ವಾರದಲ್ಲಿ ಮಳೆ ಆರಂಭವಾಗಿತ್ತು. ಈ ವರ್ಷ ಎರಡನೇ ವಾರದಿಂದಲೇ ಗಾಳಿ ಮತ್ತು ಮಳೆಯ ತೀವ್ರತೆ ಹೆಚ್ಚಾಯಿತು, ಅದು ಮೇ ತಿಂಗಳಲ್ಲೂ ಮುಂದುವರಿಯಿತು. ಇವೆಲ್ಲ ಹಾನಿ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ನಗರ ಪ್ರದೇಶದಲ್ಲಿ ಅಧಿಕ: ನಗರ ಪ್ರದೇಶದಲ್ಲಿ ಮರಗಳು ತಂತಿಗಳ ಮೇಲೆ ಬಿದ್ದು ವಿದ್ಯುತ್ ಕಂಬಗಳು ಮುರಿದುಬಿದ್ದಿರುವ ಪ್ರಮಾಣ ಹೆಚ್ಚಾಗಿದೆ. ಒಂದೊಂದು ಮರ ಬಿದ್ದಾಗಲೂ, ಎರಡು –ಮೂರು ಕಂಬಗಳಿಗೆ ಹಾನಿಯಾಗುತ್ತದೆ ಎಂಬುದು ಅಧಿಕಾರಿಗಳ ವಿಶ್ಲೇಷಣೆ.
ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಹೀಗೆ ಹಾನಿಗೊಳಗಾಗಿರುವ ಪ್ರಮಾಣ ಹೆಚ್ಚಾಗಿದೆ. ಈ ಜಿಲ್ಲಾ ವ್ಯಾಪ್ತಿಯ ಐದು ತಾಲ್ಲೂಕುಗಳಲ್ಲಿ ಏಪ್ರಿಲ್–ಮೇ(18ರವರೆಗೆ) ತಿಂಗಳಲ್ಲಿ 276 ಮರಗಳು ಉರುಳಿವೆ. 183 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ₹2.26 ಕೋಟಿ ನಷ್ಟವಾಗಿದೆ.
ಪ್ರತಿ ವರ್ಷ ಪೂರ್ವ ಮುಂಗಾರು ಮತ್ತು ಹಿಂಗಾರು ಮಳೆಯ ಅವಧಿಯಲ್ಲಿ ವಿದ್ಯುತ್ ಕಂಬಗಳು, ತಂತಿಗಳು, ವಿದ್ಯುತ್ ಪರಿವರ್ತಕಗಳು ಮತ್ತು ಡಿಪಿ ಸ್ಟ್ರಕ್ಚರ್‌ಗಳು ಹೆಚ್ಚು ಹಾನಿಗೊಳಗಾಗುತ್ತವೆ. 2022–23 ಮತ್ತು 2024–35 2022–23 ರಲ್ಲಿ ಅಂದಾಜು ₹25.52 ಕೋಟಿ, 2023–24ರಲ್ಲಿ ₹15.22 ಕೋಟಿ ಮತ್ತು 2024–25 ರಲ್ಲಿ ₹30.50 ಕೋಟಿ ನಷ್ಟವಾಗಿದೆ. ಈ ವರ್ಷ, ಇಲ್ಲಿಯವರೆಗಿನ ಅಂದಾಜು ನಷ್ಟ ₹7.08 ಕೋಟಿಯಷ್ಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.