ಬೆಂಗಳೂರು: ಹೆಚ್ಚಿದ ಉಷ್ಣಾಂಶ, ರಸ್ತೆ ಹಾಗೂ ಕಟ್ಟಡಗಳ ನಿರ್ಮಾಣ ಕಾಮಗಾರಿಯಿಂದಾಗಿ ಹೊಮ್ಮುವ ದೂಳಿನ ಕಣಗಳಿಂದ ನಗರದಲ್ಲಿ ವಾಯು ಗುಣಮಟ್ಟ ದಿನೇ ದಿನೇ ಕುಸಿಯುತ್ತಿದೆ.
ಎರಡು ವಾರಗಳಿಂದ ಧಗೆ ಹೆಚ್ಚಳವಾಗಿದೆ. ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಸಮೀಪಿಸಿದೆ. ಒಂದು ವಾರದಿಂದ ಬಹುತೇಕ ನಿತ್ಯ ಉಷ್ಣಾಂಶವು 34 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಉಷ್ಣಾಂಶ ಹೆಚ್ಚಳದಿಂದ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯುಐ) ಏರುಗತಿ ಪಡೆದಿದೆ. ಬಿಸಿ ಗಾಳಿಯು ಜನರನ್ನು ಹೈರಾಣರಾಗಿಸುತ್ತಿದೆ. ದೂಳಿನ ಕಣಗಳು ಗಾಳಿಯಲ್ಲಿ ಅಧಿಕ ಪ್ರಮಾಣದಲ್ಲಿ ಸೇರಿ ಚರ್ಮ, ಉಸಿರಾಟ ಸಂಬಂಧಿ ಸಮಸ್ಯೆಗಳೂ ಹೆಚ್ಚುತ್ತಿವೆ.
‘ನಮ್ಮ ಮೆಟ್ರೊ’ ಪ್ರಯಾಣ ದರ ಹೆಚ್ಚಳದ ಬಳಿಕ, ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆಯ ಅವಧಿ ವಾಹನ ದಟ್ಟಣೆ ಹೆಚ್ಚುತ್ತಿದೆ. ಇದರಿಂದ ವಾತಾವರಣದಲ್ಲಿ ಮಲಿನಕಾರಕ ಕಣಗಳೂ ಹೆಚ್ಚುತ್ತಿವೆ. ಜೆ.ಸಿ.ರಸ್ತೆ ಸೇರಿ ನಗರದ ಕೆಲ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸೇರಿದಂತೆ ವಿವಿಧೆಡೆ ಮೆಟ್ರೊ ಮಾರ್ಗಗಳ ಕಾಮಗಾರಿ ನಡೆಯುತ್ತಿದೆ. ಇದರಿಂದಲೂ ವಾಹನ ದಟ್ಟಣೆ ಉಂಟಾಗುತ್ತಿದೆ.
ಎಕ್ಯುಐ ಹೆಚ್ಚಳ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಪ್ರಕಾರ, ಸಿಲ್ಕ್ ಬೋರ್ಡ್, ನಗರ ರೈಲು ನಿಲ್ದಾಣ, ಬಿಟಿಎಂ ಲೇಔಟ್, ಜಯನಗರ, ಬಾಪೂಜಿ ನಗರ ಸೇರಿ ಮಾಪನಾ ಕೇಂದ್ರವಿರುವ ಸ್ಥಳಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಜನವರಿಯಲ್ಲಿ ಬಹುತೇಕ ದಿನ ‘ಸಮಾಧಾನಕರ’ ಹಂತದಲ್ಲಿದ್ದ ಗಾಳಿಯ ಗುಣಮಟ್ಟದ ಸೂಚ್ಯಂಕ, ಈಗ ‘ಮಧ್ಯಮ’ ಹಂತ ತಲುಪಿದೆ. ಈ ತಿಂಗಳ ಕೆಲ ದಿನ ಮಾಲಿನ್ಯಕಾರಕ ಪಿಎಂ-10 (ಸೂಕ್ಷ್ಮ) ಹಾಗೂ ಪಿಎಂ-2.5 (ಅತಿ ಸೂಕ್ಷ್ಮ) ದೂಳಿನ ಕಣಗಳು ಕಾಣಿಸಿಕೊಂಡಿವೆ.
ಗಾಳಿಯಲ್ಲಿ ಪಿಎಂ-10 ಪ್ರಮಾಣ 100 ಮೈಕ್ರೊ ಗ್ರಾಂ ಹಾಗೂ ಪಿಎಂ-2.5 ಪ್ರಮಾಣ 60 ಮೈಕ್ರೊ ಗ್ರಾಂ ಮೀರಬಾರದು. ಕೆಲ ಸಂದರ್ಭದಲ್ಲಿ ಈ ಕಣಗಳ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚು ಇರುವುದು ಮಂಡಳಿಯ ವಿಶ್ಲೇಷಣೆಯಿಂದ ತಿಳಿದುಬಂದಿದೆ.
‘ಅಧಿಕ ಉಷ್ಣಾಂಶದಿಂದ ಹುಲ್ಲಿನಂತಹ ಗಿಡಗಳು ಒಣಗುವುದರಿಂದ ದೂಳು ನೆಲದಲ್ಲಿ ಇರುವುದಿಲ್ಲ. ದೂಳಿನ ಕಣಗಳು ಗಾಳಿಯನ್ನು ಸೇರಲಿದ್ದು, ಗುಣಮಟ್ಟ ಕುಸಿಯಲಿದೆ. ಮಳೆ ಬಂದಲ್ಲಿ ದೂಳು ನೀರಿನಲ್ಲಿ ತೊಳೆದು ಹೋಗುತ್ತದೆ’ ಎಂದು ಕೆಎಸ್‌ಪಿಸಿಬಿ ಪರಿಸರ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಅನಾರೋಗ್ಯ ಸಮಸ್ಯೆ ಸಾಧ್ಯತೆ
‘ಗಾಳಿಯ ಗುಣಮಟ್ಟದ ಸೂಚ್ಯಂಕವು 50ರ ಒಳಗಿದ್ದಲ್ಲಿ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಎಕ್ಯುಐ 51ರಿಂದ 100ರ ಒಳಗಡೆ ಇದ್ದಲ್ಲಿ ಉಸಿರಾಟದ ಸಮಸ್ಯೆಗಳು ಕಾಣಿಸುವ ಸಾಧ್ಯತೆಗಳಿವೆ. 101ರಿಂದ 200ರ ಗಡಿಯಲ್ಲಿದ್ದಲ್ಲಿ ಶ್ವಾಸಕೋಶ ಹೃದಯ ಕಾಯಿಲೆಗಳು ಕೂಡಾ ಬರಬಹುದು’ ಎಂದು ಮಂಡಳಿಯ ಪರಿಸರ ಅಧಿಕಾರಿ ತಿಳಿಸಿದರು.
ಬಿಸಿಲ ಧಗೆಗೆ ಬೆವರುಗುಳ್ಳೆ ಮೊಡವೆ ಸೇರಿದಂತೆ ಚರ್ಮಕ್ಕೆ ಸಂಬಂಧಿಸಿದ ವಿವಿವಿಧ ಸಮಸ್ಯೆಗಳು ಕೆಲವರಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಸಂಬಂಧ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಳವಾಗುತ್ತಿದೆಡಾ. ಗಿರೀಶ್ ಎಂ.ಎಸ್. ಚರ್ಮರೋಗ ತಜ್ಞ ಇಎಸ್‌ಐ ಆಸ್ಪತ್ರೆ ರಾಜಾಜಿನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.