ADVERTISEMENT

ಪಾದಚಾರಿ ಮಾರ್ಗ ತೆರವುಗೊಳಿಸಿ: ಬಿಬಿಎಂಪಿಗೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಹೈಕೋರ್ಟ್‌
ಹೈಕೋರ್ಟ್‌    

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವಲ್ಲಿ ಬಿಬಿಎಂಪಿ ಅಸೀಮ ನಿರ್ಲಕ್ಷ್ಯ ತೋರುತ್ತಿದೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ‘ತಕ್ಷಣವೇ ಎಲ್ಲ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಮಾಡಬೇಕು’ ಎಂದು ಖಡಕ್‌ ಆದೇಶ ನೀಡಿದೆ.

‘ತ್ಯಾಗರಾಜ ನಗರದಲ್ಲಿನ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಬೇಕು’ ಎಂದು ಕೋರಿ ಸ್ಥಳೀಯ ನಿವಾಸಿ ಪ್ರಶಾಂತ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠ, ‘ಬಿಬಿಎಂಪಿ ಸಾರ್ವಜನಿಕರಿಂದ ತೆರಿಗೆ ಸಂಗ್ರಹಿಸುತ್ತಿದೆ. ಆದರೆ, ಇದಕ್ಕೆ ಪ್ರತಿಯಾಗಿ ಸರಿಯಾದ ರಸ್ತೆ, ಪಾದಚಾರಿ ಮಾರ್ಗಗಳ ಸುಧಾರಣೆಗೆ ಮುಂದಾಗುತ್ತಿಲ್ಲ. ಕೆಲವೆಡೆಯಂತೂ ಪಾದಚಾರಿ ಮಾರ್ಗಗಳನ್ನು ವಾಹನಗಳ ನಿಲುಗಡೆಯನ್ನಾಗಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸಬೇಕು’ ಎಂದು ಬಿಬಿಎಂಪಿಗೆ ನಿರ್ದೇಶಿಸಿತು.

ADVERTISEMENT

‘ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಬಿಬಿಎಂಪಿಯೊಂದಿಗೆ ಇತರೆ ಯಾವ ಇಲಾಖೆಗಳು ಭಾಗಿಯಾಗಬಹುದು. ಅವರಿಗೆ ಯಾವ ರೀತಿಯಲ್ಲಿ ನಿರ್ದೇಶನ ನೀಡಬಹುದು ಎಂಬುದರ ಬಗ್ಗೆ ತಿಳಿಸಿ’ ಎಂದು ನ್ಯಾಯಪೀಠ ಇದೇ ವೇಳೆ ಸರ್ಕಾರದ ಪರ ವಕೀಲರಿಗೆ ಸೂಚಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ವೇಳೆಗೆ ಪಾಲಿಕೆ ಆಯುಕ್ತರು ಖುದ್ದು ಹಾಜರಿರಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಫೆಬ್ರುವರಿ 1ಕ್ಕೆ ಮುಂದೂಡಿತು.

ಕೋರಿಕೆ ಏನು?: ‘ಪಾದಚಾರಿ ಮಾರ್ಗದಲ್ಲಿದ್ದ ಬಿಡಾಡಿ ದನಗಳ ದಾಳಿಯಿಂದ ನನ್ನ ತಾಯಿಗೆ ಪೆಟ್ಟಾಗಿದೆ. ಪಾದಚಾರಿ ಮಾರ್ಗವನ್ನು ಒತ್ತುವರಿದಾರರಿಂದ ತೆರವುಗೊಳಿಸಿದ ಬಳಿಕ ಅದಕ್ಕೆ ಕಬ್ಬಿಣದ ತಡೆಗೋಡೆ ನಿರ್ಮಿಸಬೇಕು. ತಾಯಿಗೆ ಆಗಿರುವ ಅಪಘಾತಕ್ಕೆ ಪರಿಹಾರವಾಗಿ ₹ 15 ಲಕ್ಷ ಪರಿಹಾರ ನೀಡುವಂತೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.