ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ
ಬೆಂಗಳೂರು: ‘ಪಹಲ್ಗಾಮ್ ದಾಳಿ ನಡೆದಾಗ ಅದನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಟ್ವೀಟ್‌ಗಳು ಹರಿದಾಡಿದ್ದವು. ಆಗ, ನೀವು ಯಾವ ಕ್ರಮ ಕೈಗೊಂಡಿದ್ದಿರಿ’ ಎಂದು ರಾಜ್ಯ ಸರ್ಕಾರವನ್ನು ಮೌಖಿಕವಾಗಿ ಪ್ರಶ್ನಿಸಿರುವ ಹೈಕೋರ್ಟ್, ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಕೋಮು ದ್ವೇಷ ಆರೋಪದ ಪ್ರಕರಣವೊಂದಕ್ಕೆ ತಡೆ ನೀಡಿದೆ.
‘ನನ್ನ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಮಿಥುನ್ ಚಕ್ರವರ್ತಿ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ರಜಾಕಾಲೀನ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸೂಲಿಬೆಲೆ ಪರ ಪದಾಂಕಿತ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ವಾದ ಆಲಿಸಿದ ನ್ಯಾಯಪೀಠ, ‘ಪಾಕಿಸ್ತಾನ್ ಜಿಂದಾಬಾದ್’ ಎಂದವರ ವಿರುದ್ಧದ ಪ್ರಕರಣವನ್ನೇ ವಜಾ ಮಾಡಲಾಗಿದೆ. ಈ ಪ್ರಕರಣದಲ್ಲಿ ಕೋಮು ದ್ವೇಷ ಏನಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ’ ಎಂದು ಆಶ್ಚರ್ಯ ವ್ಯಕ್ತಪಡಿಸಿತು.
ಇದಕ್ಕೆ ಪ್ರತಿಯಾಗಿ ಪ್ರಾಸಿಕ್ಯೂಷನ್ ಪರ ಹಾಜರಿದ್ದ ರಾಜ್ಯದ ಹೆಚ್ಚುವರಿ ಪ್ರಾಸಿಕ್ಯೂಟರ್ ಆಸ್ಮಾ ಕೌಸರ್ ಅವರು, ‘ಚಕ್ರವರ್ತಿ ಸೂಲಿಬೆಲೆ ಪದೇ ಪದೇ ಕಾನೂನು ಉಲ್ಲಂಘಿಸುವ ಚಾಳಿ ಹೊಂದಿದ್ದು ಅವರ ವಿರುದ್ದ ಸದ್ಯ ಮೂರು ಪ್ರಕರಣಗಳು ಬಾಕಿ ಇವೆ. 2024ರ ಫೆಬ್ರುವರಿ 8ರಲ್ಲಿ ಹಾಲಿ ಪ್ರಕರಣ ದಾಖಲಾಗಿದ್ದು, ಈಗ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ಪ್ರಕರಣ ಮೊದಲ ಬಾರಿಗೆ ವಿಚಾರಣೆಗೆ ನಿಗದಿಯಾಗಿದ್ದು, ವಿವರಣೆ ಪಡೆಯಲು ಕಾಲಾವಕಾಶ ನೀಡಬೇಕು’ ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆವರೆಗೂ ಪ್ರಕರಣಕ್ಕೆ ತಡೆ ನೀಡಿತು. ಪ್ರತಿವಾದಿ ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ‘ಸರ್ಕಾರ ಮಧ್ಯಂತರ ತಡೆ ತೆರವು ಕೋರುವ ಸ್ವಾತಂತ್ರ್ಯ ಹೊಂದಿದೆ’ ಎಂದು ಆದೇಶಿಸಿತು.
ಪ್ರಕರಣವೇನು?: ‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯಬೇಕಿದ್ದ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದ್ದಕ್ಕೆ ನಮಾಜ್‌ಗೆ ಸಮಯ ಎಂದು ಟ್ವೀಟ್ ಮಾಡಿದ ಆರೋಪದಡಿ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ನನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.