ADVERTISEMENT

ಫೆ. 21ರಿಂದ ‘ಹೊನ್ನಾರು’ ರಂಗೋತ್ಸವ

6 ತಂಡಗಳ ಸುವರ್ಣ ಮಹೋತ್ಸವದ ಪ್ರಯುಕ್ತ 6 ನಾಟಕಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 15:56 IST
Last Updated 18 ಫೆಬ್ರುವರಿ 2026, 15:56 IST
‘ಶರ್ಮಿಷ್ಠೆ’ ನಾಟಕದ ದೃಶ್ಯ
‘ಶರ್ಮಿಷ್ಠೆ’ ನಾಟಕದ ದೃಶ್ಯ   

ಬೆಂಗಳೂರು: ಕನ್ನಡ ರಂಗಭೂಮಿಯಲ್ಲಿ 50 ವರ್ಷಗಳನ್ನು ದಾಟಿರುವ ಆರು ರಂಗ ತಂಡಗಳು ಸುವರ್ಣ ಸಂಭ್ರಮದ ಅಂಗವಾಗಿ ಇದೇ 21ರಿಂದ 26ರವರೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ‘ಹೊನ್ನಾರು’ ರಂಗೋತ್ಸವ ಹಮ್ಮಿಕೊಂಡಿವೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಉತ್ಸವದ ಸಂಚಾಲಕರೂ ಆಗಿರುವ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ‘ರಂಗಸಂಪದ, ಸಮುದಾಯ, ಕಲಾ ಗಂಗೋತ್ರಿ, ಸ್ಪಂದನ, ನಟರಂಗ ಮತ್ತು ಬೆನಕ ರಂಗ ತಂಡವು ಸುವರ್ಣ ಸಂಭ್ರಮದಲ್ಲಿವೆ. ಇವು ಕನ್ನಡ ರಂಗಭೂಮಿ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿವೆ. ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ರಂಗೋತ್ಸವದಲ್ಲಿ ಆರು ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ’ ಎಂದು ತಿಳಿಸಿದರು. 

‘21ರಂದು 6 ಗಂಟೆಗೆ ಈ ರಂಗೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. 26ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಭಾಗವಹಿಸಲಿದ್ದಾರೆ. ಆರು ದಿನಗಳ ಈ ಉತ್ಸವದಲ್ಲಿ ವಿವಿಧ ಕ್ಷೇತ್ರಗಳ ದಿಗ್ಗರು, ಕಲಾವಿದರು ಹಾಗೂ ಕಲಾಸಕ್ತರು ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು. 

ADVERTISEMENT

‘ಆರು ದಿನಗಳು ಸಂಜೆ 6.30ರಿಂದ ನಾಟಕ ಪ್ರದರ್ಶನ ನಡೆಯಲಿದೆ. 21ರಂದು ರಂಗಸಂಪದ ತಂಡದಿಂದ ‘ಶರ್ಮಿಷ್ಠೆ’ ನಾಟಕ, 22ರಂದು ಸಮುದಾಯ ತಂಡದಿಂದ ‘ಭಗವಂತನ ಮರಣ’ ನಾಟಕ, 23ರಂದು ನಟರಂಗ ತಂಡದಿಂದ ‘ನೀರಗನ್ನಡಿ’ ನಾಟಕ, 24ರಂದು ಕಲಾ ಗಂಗೋತ್ರಿ ತಂಡದಿಂದ ‘ಮನೆಯೇ ದೇವರು’ ನಾಟಕ, 25ರಂದು ಸ್ಪಂದನ ತಂಡದಿಂದ ‘ಬೆಳಗಿನ ಕನಸು’ ನಾಟಕ ಹಾಗೂ 26ರಂದು ಬೆನಕ ತಂಡದಿಂದ ‘ಜೋಕುಮಾರಸ್ವಾಮಿ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ಲಭ್ಯ’ ಎಂದು ತಿಳಿಸಿದರು.

ಕಲಾವಿದರಾದ ಬಿ.ಜಯಶ್ರೀ, ಉಮಾಶ್ರೀ, ಗಿರಿಜಾ ಲೋಕೇಶ್, ರಂಗಕರ್ಮಿಗಳಾದ ಬಿ.ವಿ. ರಾಜಾರಾಂ, ಟಿ.ಎಸ್. ನಾಗಾಭರಣ, ವಿ.ಎಂ. ನಾಗೇಶ್, ಶಶಿಧರ್ ಬಾರೀಘಾಟ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.