ಹಾಪ್‌ಕಾಮ್ಸ್ ಸಂಚಾರಿ ವಾಹನದ ಮೂಲಕ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಾವು ಮಾರಾಟ ಮಾಡಿದರು
ಬೆಂಗಳೂರು: ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘವು (ಹಾಪ್‌ಕಾಪ್ಸ್) ಖಾಸಗಿ ಸಹಭಾಗಿತ್ವದಲ್ಲಿ ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ಹಣ್ಣು ಮತ್ತು ತರಕಾರಿಯನ್ನು ಮೊಬೈಲ್ ವಾಹನಗಳ ಮೂಲಕ ಮಾರಾಟ ಮಾಡುವ ಯೋಜನೆ ರೂಪಿಸಿದೆ.
ಗ್ರಾಹಕರ ಆಶಯಕ್ಕೆ ಅನುಗುಣವಾಗಿ ಹಾಪ್‌ಕಾಮ್ಸ್ ಆಧುನಿಕ ಮಳಿಗೆಗಳು ಮತ್ತು ಸಂಚಾರಿ ಮೊಬೈಲ್ ವಾಹನಗಳನ್ನು ಪರಿಚಯಿಸಿದೆ. ನಗರದಲ್ಲಿರುವ ಅಪಾರ್ಟ್‌ಮೆಂಟ್‌ಗಳಿಗೆ ನಿತ್ಯ ಭೇಟಿ ನೀಡಿ, ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುತ್ತಿದೆ. ಆದರೆ, ಹಾಪ್‌ಕಾಮ್ಸ್‌ನಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ನಗರದ ಎಲ್ಲ ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿ, ವ್ಯಾಪಾರ–ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಖಾಸಗಿ ಸಹಭಾಗಿತ್ವದಲ್ಲಿ ಸಂಚಾರಿ ಮೊಬೈಲ್ ವಾಹನಗಳ ಮೂಲಕ ತರಕಾರಿ–ಹಣ್ಣುಗಳ ಮಾರಾಟ ಮಾಡುವ ಯೋಜನೆ ಪರಿಚಯಿಸಿದೆ. ಈ ಮೂಲಕ ಯುವಕರಿಗೆ ಸ್ವಾವಲಂಬಿಗಳಾಗಲು ಅವಕಾಶ ಕಲ್ಪಿಸುತ್ತಿದೆ.
‘ಈ ಯೋಜನೆಯಡಿ ವ್ಯಾಪಾರ ಮಾಡಲು ಮುಂದೆ ಬರುವ ಆಸಕ್ತರಿಗೆ ಹಾಪ್‌ಕಾಮ್ಸ್‌ನಿಂದ ಹಣ್ಣು ಮತ್ತು ತರಕಾರಿಗಳನ್ನು ಪೂರೈಸುವ ಜೊತೆಗೆ ಸಂಚಾರಿ ವಾಹನವನ್ನೂ ನೀಡಲಾಗುತ್ತದೆ. ಆಸಕ್ತರ ಬಳಿ ವಾಹನ ಇದ್ದರೆ, ಅದಕ್ಕೆ ಪ್ರತ್ಯೇಕವಾಗಿ ಬಾಡಿಗೆಯನ್ನು ಪಾವತಿಸಲಾಗುತ್ತದೆ. ನಿತ್ಯ ಯಾವ ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿ, ವ್ಯಾಪಾರ ಮಾಡಬೇಕು ಎಂಬ ಮಾಹಿತಿಯನ್ನು ನೀಡಲಾಗುತ್ತದೆ. ಹಾಪ್‌ಕಾಮ್ಸ್ ನಿಗದಿಪಡಿಸಿದ ದರದಲ್ಲಿಯೇ ಮಾರಾಟ ಮಾಡಬೇಕು’ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮೇಶ ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಯೋಜನೆಯಡಿ ವ್ಯಾಪಾರ ಮಾಡಲು ಆಸಕ್ತಿ ಇರುವವರು ಭದ್ರತೆಗಾಗಿ ₹ 1ಲಕ್ಷ ಠೇವಣಿ ಇಡಬೇಕು. ಇದರಲ್ಲಿ ₹ 50 ಸಾವಿರ ಭದ್ರತಾ ಠೇವಣಿ, ₹ 50 ಸಾವಿರ ಮೌಲ್ಯದ ಹಣ್ಣು ಮತ್ತು ತರಕಾರಿಗಳನ್ನು ಪೂರೈಕೆ ಮಾಡಲಾಗುತ್ತದೆ. ಒಂದು ತಿಂಗಳಲ್ಲಿ ಕನಿಷ್ಠ 25 ದಿನಗಳಲ್ಲಿ ₹4 ಲಕ್ಷ ಮೌಲ್ಯದ ವ್ಯಾಪಾರ–ವಹಿವಾಟು ನಡೆಸಬೇಕು. ಇದರಲ್ಲಿ ಕಮಿಷನ್ ರೂಪದಲ್ಲಿ ಪ್ರತಿ ತಿಂಗಳು ₹ 40 ಸಾವಿರ ಆದಾಯ ಗಳಿಸಬಹುದು’ ಎಂದು ಮಾಹಿತಿ ನೀಡಿದರು.
‘ಬೆಂಗಳೂರು ನಗರದಲ್ಲಿರುವ 220 ಹಾಪ್‌ಕಾಮ್ಸ್ ಮಳಿಗೆಗಳ ಪೈಕಿ 163 ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಯ ರೈತರು ನಿತ್ಯ 35ರಿಂದ 40 ಟನ್ ಹಣ್ಣು–ತರಕಾರಿಯನ್ನು ಹಾಪ್‌ಕಾಮ್ಸ್‌ಗೆ ಪೂರೈಕೆ ಮಾಡುತ್ತಿದ್ದಾರೆ’ ಎಂದು ತಿಳಿಸಿದರು
‘ಹಾಪ್‌ಕಾಮ್ಸ್ ನಿವೃತ್ತರಿಗೆ ಆದ್ಯತೆ’
‘ಅಪಾರ್ಟ್‌ಮೆಂಟ್‌ಗಳಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಹಾಪ್‌ಕಾಮ್ಸ್‌ನ ನಿವೃತ್ತ ಸಿಬ್ಬಂದಿಗೆ ಆದ್ಯತೆ ನೀಡಲಾಗುತ್ತದೆ. ನಂತರ ನಿರುದ್ಯೋಗಿಗಳಿಗೆ ಅವಕಾಶ ನೀಡಲಾಗುವುದು. ರೈತರ ತಾಜಾ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ. ನಿರುದ್ಯೋಗಿಗಳು ಈ ಅವಕಾಶವನ್ನು ಬಳಸಿಕೊಂಡು ಸ್ವಾವಲಂಬಿಗಳಾಗಬಹುದು’ ಎಂದು ಮಿರ್ಜಿ ಉಮೇಶ ಶಂಕರ ತಿಳಿಸಿದರು.
60 ಅಪಾರ್ಟ್‌ಮೆಂಟ್‌ಗಳೊಂದಿಗೆ ಒಪ್ಪಂದ
‘ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ ಇರುವ 60ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಿಗೆ ಹಣ್ಣು ಮತ್ತು ತರಕಾರಿ ಪೂರೈಕೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಆಸಕ್ತ ಯುವಕರು ಮುಂದೆ ಬಂದರೆ ನಿಗದಿತ ಅಪಾರ್ಟ್‌ಮೆಂಟ್‌ಗಳಿಗೆ ಸದ್ಯದಲ್ಲೇ ಹಣ್ಣು–ತರಕಾರಿ ಪೂರೈಕೆಯಾಗಲಿದೆ. ಈ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಹಾಪ್‌ಕಾಮ್ಸ್ ಕೇಂದ್ರ ಕಚೇರಿಗೆ ಭೇಟಿ ನೀಡಬಹುದು ಅಥವಾ 92411 33552 ಸಂಪರ್ಕಿಸಬಹುದು’ ಎಂದು ಹಾಪ್‌ಕಾಮ್ಸ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.